ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದಲ್ಲಿ ತನ್ನದೇನೋ ಪಾತ್ರವಿದೆ ಎಂದು ಹೇಳುತ್ತಾ ಸುದ್ದಿಗೆ ತಿರುಗುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ಫೋನ್ ಕರೆಗೆ ಸ್ಪಂದಿಸಿದ್ದು, ಪ್ರಮುಖ ವಿಚಾರಗಳನ್ನು ಗಂಭೀರವಾಗಿ ಆಲಿಸಿದ್ದಾರೆ.
ಪ್ರಧಾನಿ ಮೋದಿ ಅವರು ಈ ಸಂಭಾಷಣೆಯಲ್ಲಿ, ಕದನ ವಿರಾಮವಾಗಲಿ ಅಥವಾ ಜಮ್ಮು ಮತ್ತು ಕಾಶ್ಮೀರ ವಿವಾದವಾಗಲಿ, ಭಾರತ ಯಾವತ್ತೂ ಮೂರನೇ ಶಕ್ತಿಯ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರಂತೆ.
ಹೊಸದಿಲ್ಲಿ ಮೂಲಗಳಿಂದ ಲಭಿಸಿದ ಮಾಹಿತಿಯ ಪ್ರಕಾರ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ “ಆಪರೇಷನ್ ಸಿಂಧೂರ” ಎಂಬ ಸೇನಾ ಕಾರ್ಯಾಚರಣೆ, ಯಾವುದೇ ಅಂತಾರಾಷ್ಟ್ರೀಯ ಒತ್ತಡ ಅಥವಾ ಮೂರನೇ ಶಕ್ತಿಯ ಪ್ರಭಾವದಿಂದ ಸ್ಥಗಿತಗೊಳ್ಳಲಿಲ್ಲ ಎಂಬುದನ್ನು ಮೋದಿ ಸ್ಪಷ್ಟಪಡಿಸಿದ್ದಾರೆ.
ಕೆನಡಾದಲ್ಲಿ ನಡೆದ G-7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಮೋದಿ ಅವರು, ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕ ಹೊಂದಿದ್ದು, ಸುಮಾರು 35 ನಿಮಿಷಗಳ ಕಾಲ ಇಬ್ಬರೂ ಮುಖಾಮುಖಿಯಾಗಿಯೇ ವಿಷಯ ಚರ್ಚಿಸಿದ್ದಾರೆ. ಈ ವೇಳೆ ಟ್ರಂಪ್ ಅವರ ಮಧ್ಯಸ್ಥಿಕೆಗೆ ಸಂಬಂಧಿಸಿದ ವಾದಗಳನ್ನು ಮೋದಿ ನಿರಾಕರಿಸಿದ್ದಾರೆ ಎಂಬುದು ಮಹತ್ವದ ಸಂಗತಿ.









