ತಿರುವನಂತಪುರ: ಕೇರಳದ ತಿರುವನಂತಪುರದಲ್ಲಿ ನಡೆಯುವ ವಿಶ್ವಪ್ರಸಿದ್ಧ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಐತಿಹಾಸಿಕ ‘ಆರಟ್ಟು’ ಮೆರವಣಿಗೆಯಲ್ಲಿ ಕೇಂದ್ರ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಇಂದು ಭಕ್ತಿಪೂರ್ವಕವಾಗಿ ಪಾಲ್ಗೊಂಡರು.
ವರ್ಷಕ್ಕೆ ಎರಡು ಬಾರಿ ನಡೆಯುವ ಈ ವಿಶಿಷ್ಟ ಪರಂಪರೆಯು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಅಪೂರ್ವ ಸಂಗಮವಾಗಿದೆ.
ವಿಮಾನ ನಿಲ್ದಾಣದ ರನ್‌ವೇ ಮೂಲಕ ಸಾಗಿದ ಮೆರವಣಿಗೆ: ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಮೂಲಕ ಸಾಗಿ ಶಂಖುಮುಖಂ ಸಮುದ್ರ ತೀರದಲ್ಲಿ (ಹಿಂದೂ ಮಹಾಸಾಗರ) ಪವಿತ್ರ ಸ್ನಾನ ಮಾಡುವ ಮೂಲಕ ಈ ಮೆರವಣಿಗೆ ಸಂಪನ್ನಗೊಳ್ಳುತ್ತದೆ. ಈ ದೈವಿಕ ಸಂಪ್ರದಾಯಕ್ಕೆ ಗೌರವ ಸೂಚಿಸಿ, ಮೆರವಣಿಗೆ ಸಾಗುವ ಸಮಯದಲ್ಲಿ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಈ ಅಪರೂಪದ ದೃಶ್ಯವು ನಮ್ಮ ಪ್ರಾಚೀನ ಪದ್ಧತಿಯ ಬಗೆಗೆ ಆಧುನಿಕ ವ್ಯವಸ್ಥೆಯೂ ಹೊಂದಿರುವ ಗೌರವಕ್ಕೆ ಸಾಕ್ಷಿಯಾಗಿದೆ.
ಸಾಂಸ್ಕೃತಿಕ ಪರಂಪರೆಯ ದರ್ಶನ: ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಸಚಿವರು, “ತಿರುವಾಂಕೂರಿನ ಮಹಾರಾಜರು ಮತ್ತು ಲಕ್ಷಾಂತರ ಭಕ್ತರ ಜೊತೆಗೂಡಿ ಈ ಪವಿತ್ರ ಆರಟ್ಟಿನಲ್ಲಿ ಪಾಲ್ಗೊಂಡಿದ್ದು ನನ್ನ ಪಾಲಿನ ದೈವಿಕ ಸೌಭಾಗ್ಯ. ಇದು ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅಚಲ ಧಾರ್ಮಿಕ ನಂಬಿಕೆಯ ಪ್ರತೀಕವಾಗಿದೆ. ಈ ವಿಸ್ಮಯಕಾರಿ ಕ್ಷಣಗಳು ನನ್ನಲ್ಲಿ ಅಪಾರ ಸಂತಸ ಹಾಗೂ ದೈವಿಕ ಅನುಭೂತಿಯನ್ನುಂಟುಮಾಡಿವೆ,” ಎಂದು ಭಾವಪರವಶರಾಗಿ ನುಡಿದರು.
ಭಕ್ತ ಸಾಗರ: ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಶೋಭಾ ಕರಂದ್ಲಾಜೆ ಅವರು ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ತಿರುವಾಂಕೂರು ರಾಜಮನೆತನದ ಸದಸ್ಯರು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.








