ವಿಜಯಪುರ: ಜಿಲ್ಲೆಯ ಶೈಕ್ಷಣಿಕ ಮತ್ತು ಸಾಮಾಜಿಕ ವಲಯದಲ್ಲಿ ಹೊಸ ಕ್ರಾಂತಿ ಮೂಡಿಸುವ ನಿಟ್ಟಿನಲ್ಲಿ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ತನ್ನ ಸಿ.ಎಸ್.ಆರ್ (CSR) ಯೋಜನೆಯಡಿ ವಿಜಯಪುರ ಜಿಲ್ಲೆಗೆ ಭರ್ಜರಿ ಕೊಡುಗೆ ನೀಡಿದೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಚಿವರಾದ ಎಂ. ಬಿ. ಪಾಟೀಲ್ ಅವರು ಈ ಸೌಲಭ್ಯಗಳನ್ನು ಲೋಕಾರ್ಪಣೆಗೊಳಿಸಿದರು.
ಪವರ್ ಗ್ರಿಡ್‌ನಿಂದ ಲಭಿಸಿದ ಪ್ರಮುಖ ಸೌಲಭ್ಯಗಳು:
ಹೈಟೆಕ್ ಶೈಕ್ಷಣಿಕ ಪರಿಸರ: 145 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳಿಗೆ 2,500 ಹೈಟೆಕ್ ಬೆಂಚ್‌ಗಳನ್ನು ವಿತರಿಸಲಾಯಿತು.
ಸ್ಮಾರ್ಟ್ ಕ್ಲಾಸ್ ಸೌಲಭ್ಯ: 20 ಸರ್ಕಾರಿ ಪ್ರೌಢಶಾಲೆಗಳಿಗೆ ಆಧುನಿಕ ಸ್ಮಾರ್ಟ್ ಕ್ಲಾಸ್ ಪರಿಕರಗಳನ್ನು ನೀಡುವ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.
ಸ್ವಾವಲಂಬಿ ಬದುಕು: ನಿರುದ್ಯೋಗಿಗಳಿಗೆ ನೆರವಾಗಲು 6 ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ಹಸ್ತಾಂತರಿಸಲಾಯಿತು.
ಪರಿಸರ ಸ್ನೇಹಿ ಕ್ರೀಡಾಂಗಣ: ಜಿಲ್ಲಾ ಕ್ರೀಡಾಂಗಣಕ್ಕೆ ಸೋಲಾರ್ ರೂಫ್ ಟಾಪ್ ಅಳವಡಿಸುವ ಮೂಲಕ ಹಸಿರು ಇಂಧನ ಬಳಕೆಗೆ ಚಾಲನೆ ನೀಡಲಾಗಿದೆ.
ವಿಶೇಷ ಚೇತನರಿಗೆ ನೆರವು: ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಗೆ ಅಗತ್ಯವಾದ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸಿರುವ ಪವರ್ ಗ್ರಿಡ್ ಸಂಸ್ಥೆಗೆ ಸಚಿವರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
“ವಿಜಯಪುರ ಜಿಲ್ಲೆಯ ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ಸಾರ್ವಜನಿಕ ಮೂಲಸೌಕರ್ಯ ಹೆಚ್ಚಿಸಲು ಪವರ್ ಗ್ರಿಡ್ ಸಂಸ್ಥೆ ಕೋಟ್ಯಾಂತರ ರೂಪಾಯಿಗಳ ಅನುದಾನ ನೀಡಿರುವುದು ಶ್ಲಾಘನೀಯ. ಈ ಕೊಡುಗೆಯಿಂದ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ.” — ಎಂ. ಬಿ. ಪಾಟೀಲ್, ಕೈಗಾರಿಕಾ ಸಚಿವರು.
ಈ ಐತಿಹಾಸಿಕ ಕ್ಷಣದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಆನಂದ್ ಕೆ, ಜಿಪಂ ಸಿಇಒ ಶ್ರೀ ರಿಷಿ ಆನಂದ್, ಪವರ್ ಗ್ರಿಡ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಮುಕುಂದ ಶರದ ಹೆಜಿಬ್, ಶ್ರೀಮತಿ ಶಕುಂತಲಾ ಸಾಹು, ಶ್ರೀ ತನ್ವೀರ್ ಎಂ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.






