ಶಿವಮೊಗ್ಗ: ರೈಲ್ವೆ ಇಲಾಖೆಯು ಹಲವು ರೈಲುಗಳ ಸಂಚಾರ ಮತ್ತು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು ಇದು ನೂತನ ವರ್ಷದಿಂದ ಜಾರಿಗೆ ಬರಲಿದೆ.
ವಾರಕ್ಕೆ ಮೂರು ದಿನ ಸಂಚರಿಸುತ್ತಿದ್ದ ಯಶವಂತಪುರ – ಶಿವಮೊಗ್ಗ (16581) ರಾತ್ರಿ ಎಕ್ಸ್‌ಪ್ರೆಸ್ ರೈಲು ಸೋಮವಾರ, ಬುಧವಾರ ಮತ್ತು ಶನಿವಾರದ ಬದಲಾಗಿ ಇನ್ನು ಮುಂದೆ ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಚರಿಸಲಿದೆ. ಹಗಲಿನಲ್ಲಿ ಪ್ರತಿದಿನ ಸಂಚರಿಸುವ ಯಶವಂತಪುರ – ಶಿವಮೊಗ್ಗ (16579) ಎಕ್ಸ್‌ಪ್ರೆಸ್ ರೈಲು ಮತ್ತು ವಾರಕ್ಕೊಮ್ಮೆ ಸಂಚರಿಸುವ ಎಂಜಿಆರ್ ಚೆನ್ನೈ – ಶಿವಮೊಗ್ಗ (12691) ಎಕ್ಸ್‌ಪ್ರೆಸ್ ರೈಲು ಸೂಪರ್‌ಫಾಸ್ಟ್ ಆಗಿ ಬದಲಾಗಿದೆ.
ರೈಲಿನ ವೇಗ ವೃದ್ಧಿ
ವಾರಕ್ಕೆ ಮೂರು ದಿನ ಸಂಚರಿಸುವ ಯಶವಂತಪುರ-ಶಿವಮೊಗ್ಗ ರಾತ್ರಿ ರೈಲು (25 ನಿಮಿಷ), ಚೆನ್ನೈ – ಶಿವಮೊಗ್ಗ ರೈಲು (20 ನಿಮಿಷ), ಯಶವಂತಪುರ – ಶಿವಮೊಗ್ಗ (10 ನಿಮಿಷ), ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಜನಶತಾಬ್ಧಿ (5 ನಿಮಿಷ) ರೈಲು ವೇಗ ವೃದ್ಧಿಸಿಕೊಂಡಿದ್ದು ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿಕೊಂಡಿವೆ.
ಬದಲಾದ ವೇಳಾಪಟ್ಟಿ
ವಾರಕ್ಕೆ ಮೂರು ದಿನ ಸಂಚರಿಸುವ ಯಶವಂತಪುರ – ಶಿವಮೊಗ್ಗ ರಾತ್ರಿ ರೈಲು ಯಶವಂತಪುರದಿಂದ ರಾತ್ರಿ 11.30ರ ಬದಲಿಗೆ ಇನ್ನು ಮುಂದೆ 12.15ಕ್ಕೆ ಹೊರಡಲಿದೆ. ಶಿವಮೊಗ್ಗ – ಮೈಸೂರು (16226) ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 11.15ರ ಬದಲಿಗೆ 11.25ಕ್ಕೆ ಹೊರಡಲಿದೆ. ಮೈಸೂರು ತಾಳಗುಪ್ಪ (16227) ಡೈಲಿ ಎಕ್ಸ್‌ಪ್ರೆಸ್ ಸಂಜೆ 7.30ರ ಬದಲಿಗೆ 7.40ಕ್ಕೆ ಹೊರಡಲಿದೆ.
ವಾರಕ್ಕೊಮ್ಮೆ ಸಂಚರಿಸುವ ಶಿವಮೊಗ್ಗ – ಎಂಜಿಆರ್ ಚೆನ್ನೈ ರೈಲು ಶಿವಮೊಗ್ಗದಿಂದ ಸಂಜೆ 6.15ರ ಬದಲಿಗೆ 6.40ಕ್ಕೆ ಹೊರಡಲಿದೆ. ಶಿವಮೊಗ್ಗ ಯಶವಂತಪುರ ರೈಲು ಮಧ್ಯಾಹ್ನ 3.45ರ ಬದಲಿಗೆ 3.00ಕ್ಕೆ ಹೊರಡಲಿದೆ.







