ಹೊಸ ವರ್ಷದ ಕಿಕ್: 7 ಸಾವಿರ ಕೆಜಿ ಕೇಕ್, ಹರಿಯಲಿದೆ ಮದ್ಯದ ಹೊಳೆ; ಸ್ಮಾರ್ಟ್ ಸಿಟಿಯಲ್ಲಿ ಸಡಗರದ ತಯಾರಿ.

ದಾವಣಗೆರೆ: ಹೊಸ ವರ್ಷದ ಹಿನ್ನೆಲೆಯಲ್ಲಿ ವಿದ್ಯಾ ಕಾಶಿಯಲ್ಲಿ ವಾಣಿಜ್ಯ ಚಟುವಟಿಕೆಗಳು ಗರಿಗೆದರಿವೆ. ಬೇಕರಿ ತಿನಿಸುಗಳು, ಸಿಹಿ ತಿನಿಸು, ಮುಖ್ಯವಾಗಿ ಕೇಕ್‌ಗಳಿಗೆ ಹೆಚ್ಚು ಬೇಡಿಕೆಯಿದ್ದು, ಈ ಬಾರಿ ಜಿಲ್ಲಾದ್ಯಂತ 7 ಸಾವಿರ ಕೆಜಿಗೂ ಅಧಿಕ ಕೇಕ್‌ ಮಾರಾಟವಾಗಲಿದೆ. ಇದರೊಂದಿಗೆ ಮದ್ಯ ಪ್ರಿಯರ ಸಂಭ್ರಮಕ್ಕಾಗಿ ಸುಮಾರು 2 ಲಕ್ಷ ಲೀಟರ್‌ ಮದ್ಯ ಬಿಕರಿಯಾಗುವ ನಿರೀಕ್ಷೆಯಿದೆ.

ದಾವಣಗೆರೆ ನಗರ ಒಂದರಲ್ಲೇ ಈ ಬಾರಿ 5 ಸಾವಿರ ಕೆಜಿ ಕೇಕ್‌ ತಯಾರಾಗಲಿದೆ. ನಗರದ ಆಹಾರ್‌ 2000 ಮಳಿಗೆಯಲ್ಲಿ ಹೊಸ ವರ್ಷಕ್ಕಾಗಿ ಈ ಬಾರಿ 1500 ಕೆಜಿ ಕೇಕ್‌ ತಯಾರಿಸುತ್ತಿದ್ದು, ಕೇಕ್‌ ವರ್ಲ್ಡ್ ನಲ್ಲಿ 700 ಕೆಜಿ ಹಾಗೂ ರಾಕಿಂಗ್‌ನಲ್ಲಿ 1200 ಕೆಜಿ ಕೇಕ್‌ ತಯಾರಿಸಲಾಗುತ್ತಿದೆ. ಇದರೊಂದಿಗೆ ನಗರದ ದೊಡ್ಡ ಹಾಗೂ ಸಣ್ಣ ಪುಟ್ಟ ಬೇಕರಿಗಳನ್ನು ಸೇರಿಸಿದರೆ 100 ಕೆಜಿಗಿಂತಲೂ ಅಧಿಕ ಕೇಕ್‌ ತಯಾರಾಗುತ್ತಿದೆ.

ಬುಧವಾರ ಸಂಜೆಯಿಂದ ಕೇಕ್‌ಗಳ ಖರೀದಿ ಚುರುಕು ಪಡೆಯಲಿದ್ದು, ಬೇಕರಿಗಳ ಮುಂದೆ ವಿಶೇಷ ಕೇಕ್‌ಗಳ ಪ್ರದರ್ಶನ ಮಾಡಲಾಗುತ್ತಿದೆ. ರಾತ್ರಿ 12ರ ಬಳಿಕ ಕೇಕ್‌ ಕತ್ತರಿಸುತ್ತಾರೆ. ಕಾರಣ ಪೇಸ್ಟರಿ ಅಥವಾ ಕೋಲ್ಡ್‌ ಕೇಕ್‌ ಕೊಂಡೊಯ್ದರೆ ಕತ್ತರಿಸುವ ಹೊತ್ತಿಗೆ ಕರಗಿ ಹೋಗುತ್ತದೆ. ಕಾರಣ, ನಾರ್ಮಲ್‌ ಕೇಕ್‌ಗೆ (ಕ್ರೀಂ ಕೇಕ್‌) ಹೆಚ್ಚು ಬೇಡಿಕೆ ಇದೆ. ಒಂದು ಕೆಜಿ ಕ್ರೀಮ್‌ ಕೇಕ್‌ ಬೆಲೆ 350 ರೂ.ನಿಂದ ಆರಂಭವಾಗಲಿದ್ದು, ಪೇಸ್ಟರಿ ಬೆಲೆ ಕೆಜಿಗೆ 550 ರೂ.ನಿಂದ ಆರಂಭವಾಗುತ್ತದೆ.

ಕೇಕ್‌ ಮಾರಾಟ ಡಲ್‌:

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೇಕ್‌ ಮಾರಾಟ ಡಲ್‌ ಆಗಿದೆ. ಹಿಂದಿನ ವರ್ಷ ಹೊಸ ವರ್ಷಕ್ಕಾಗಿ ಆಹಾರ್‌ 2000 ನವರು 2000 ಕೆಜಿ ಕೇಕ್‌ ತಯಾರಿಸಿದ್ದರು. ಕೇಕ್‌ ವರ್ಲ್ಡ್ ನವರು 1200 ಕೆಜಿ ತಯಾರಿಸಿದ್ದರು. ಆದರೆ ಈ ಬಾರಿ ಪಿಬಿ ರಸ್ತೆ ಕಾಮಗಾರಿ ನಡೆಸುತ್ತಿರುವುದರಿಂದ ವ್ಯಾಪಾರ ಕಡಿಮೆ ಆಗಲಿದೆ ಎಂಬುದು ಬೇಕರಿ ಮಾಲೀಕರ ಬೇಸರದ ಮಾತು. ಇದೇ ಕಾರಣಕ್ಕೆ ಕಳೆದ ವರ್ಷಕ್ಕಿಂತಲೂ ಕಡಿಮೆ ಕೇಕ್‌ ತಯಾರಿಸುತ್ತಿರುವುದಾಗಿ ಆಹಾರ್‌ 2000 ವ್ಯವಸ್ಥಾಪಕ ರಮೇಶ್‌ ಹಾಗೂ ಕೇಕ್‌ ವರ್ಲ್ಡ್ ನ ನಿಹಾಲ್‌ ತಿಳಿಸಿದ್ದಾರೆ.

2 ಲಕ್ಷ ಲೀ. ಮದ್ಯ ಮಾರಾಟ ನಿರೀಕ್ಷೆ!

ಹೊಸ ವರ್ಷದ ಹಿನ್ನೆಲೆಯಲ್ಲಿ ಡಿ.30ರಿಂದ ಜ.1ರ ರಾತ್ರಿವರೆಗೆ ಒಟ್ಟು 2 ಲಕ್ಷ ಲೀಟರ್‌ ಮದ್ಯ ಮಾರಾಟವಾಗುವ ನಿರೀಕ್ಷೆಯಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2024ರ ಡಿಸೆಂಬರ್‌ 1ರಿಂದ 31ರವರೆಗೆ 1,51,708 ಕಾಟನ್‌ ಬಾಕ್ಸ್‌ ಅಂದರೆ, 13,06,757 ಲೀಟರ್‌ ಭಾರತದಲ್ಲಿ ತಯಾರಿಸಿದ ಮದ್ಯ (ಇಂಡಿಯಾ ಮೇಡ್‌ ಲಿಕ್ಕರ್‌- ಐಎಂಎಲ್‌) ಮಾರಾಟವಾಗಿತ್ತು. ಈ ಬಾರಿ 2025ರ ಡಿ.1ರಿಂದ 29ರವರೆಗೆ 11,10,130 ಲೀಟರ್‌ ಭಾರತೀಯ ಮದ್ಯ ಮಾರಾಟವಾಗಿದೆ. ಕೊನೆಯ ಎರಡು ದಿನಗಳಲ್ಲಿ ಒಂದು ಲಕ್ಷ ಲೀ. ಭಾರತೀಯ ಮದ್ಯ ಹಾಗೂ ಅಷ್ಟೇ ಪ್ರಮಾಣದ ಬಿಯರ್‌ ಮಾರಾಟವಾಗುವ ನಿರೀಕ್ಷೆಯಿದೆ. ಬೆಲೆ ಏರಿಕೆ ಕಾರಣದಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ವರ್ಷ ಮದ್ಯ ಮಾರಾಟ ಕಡಿಮೆಯಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಜೂನ್‌, ಜುಲೈನಲ್ಲಿ ಮದ್ಯದ ಬೆಲೆ ಹೆಚ್ಚಿಸದ ಬಳಿಕ ಮದ್ಯ ಮಾರಾಟ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಶೇ.10ರಷ್ಟು ಮಾರಾಟ ಹೆಚ್ಚಾಗಬೇಕಿತ್ತು, ಆದರೆ ಮದ್ಯ ಮಾರಾಟ ನಿರೀಕ್ಷಿಸಿದಷ್ಟು ಹೆಚ್ಚಳವಾಗಿಲ್ಲ.

  • Related Posts

    ಮುಳ್ಳೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ: ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗಿ

    ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮಹೋತ್ಸವವನ್ನು ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ಆಚರಿಸಲಾಯಿತು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ…

    Continue reading
    ಶಾಸಕ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್

    ಬೆಂಗಳೂರು: ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಹೊಸೂರು ಮುಖ್ಯರಸ್ತೆಯ ಕೊನಪ್ಪನ ಅಗ್ರಹಾರದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಹಿರಿಯೂರು ಶಾಸಕ ಶ್ರೀ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯನ್ನು…

    Continue reading

    Leave a Reply

    Your email address will not be published. Required fields are marked *