ದಾವಣಗೆರೆ: ಅಯೋಧ್ಯೆಯ ಶ್ರೀರಾಮ ಮಂದಿರದ ‘ರಾಮಲಲ್ಲಾ’ ಮೂರ್ತಿಯನ್ನು ಕೆತ್ತುವ ಮೂಲಕ ವಿಶ್ವದಾದ್ಯಂತ ಮನೆಮಾತಾಗಿರುವ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ , ಇದೀಗ ಕರುನಾಡಿನ ಹಿರಿಯ ರಾಜಕಾರಣಿ ಹಾಗೂ ಲಿಂಗಾಯತ ಸಮಾಜದ ಮುತ್ಸದ್ದಿ ನಾಯಕ ದಿವಂಗತ ಡಾ. ಶಾಮನೂರು ಶಿವಶಂಕರಪ್ಪಅವರ ಭವ್ಯ ಪುತ್ಥಳಿಯನ್ನು ಕೆತ್ತನೆ ಮಾಡುವ ಮೂಲಕ ಗೌರವ ಸಮರ್ಪಿಸಿದ್ದಾರೆ.
ದಾವಣಗೆರೆಯ ಆನೆಕೊಂಡದ ಕಲ್ಲೇಶ್ವರ ರೈಸ್ ಮಿಲ್ ಆವರಣದ ಬೃಹತ್ 100 ಎಕರೆ ಪ್ರದೇಶದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ದಿ. ಶಾಮನೂರು ಶಿವಶಂಕರಪ್ಪ ನುಡಿ ನಮನ’ ಹಾಗೂ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಈ ಪುತ್ಥಳಿಯನ್ನು ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ದಿ.ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿ ಕೆತ್ತನೆ ಬಗ್ಗೆ ಶಿಲ್ಪಿ ಅರುಣ್ ಯೋಗಿರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾಜಿ ಸಚಿವ ಮತ್ತು ಖ್ಯಾತ ಸಮಾಜ ಸುಧಾರಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ಪ್ರತಿಮೆಯನ್ನು ಕೆತ್ತನೆ ಮಾಡುವ ಅವಕಾಶ ನನಗೆ ಸಿಕ್ಕಿದ್ದು ಭಾಗ್ಯ ಎಂದು ಬರೆದುಕೊಂಡಿದ್ದಾರೆ.
ಶಿಲ್ಪಿ ಅರುಣ್ ಯೋಗಿರಾಜ್ ಭಾವುಕ ನುಡಿ
ನುಡಿ ನಮನ ಕಾರ್ಯಕ್ರಮದಲ್ಲಿ ಶಾಮನೂರು ಶಿವಶಂಕರಪ್ಪ ಪುತ್ಥಳಿ ಅನಾವರಣ ಮಾಡಿ ಮಾತನಾಡಿದ ಅರುಣ್ ಯೋಗಿರಾಜ್, ಶಾಮನೂರು ಅವರಲ್ಲಿಮನುಷ್ಯತ್ವ ಇತ್ತು. ಬಡವರು, ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಲು ಟ್ರಸ್ವ್ ಮೂಲಕ ನೆರವಾಗುವ ಕೊಡುಗೈದಾನಿಯಾಗಿದ್ದರು. ಪ್ರತಿಯೊಬ್ಬರಿಗೂ ಹುಟ್ಟು ಆಕಸ್ಮಿಕ, ಆದರೆ ಸಾವು ಖಚಿತ, ಈ ನಡುವಿನ ಪಯಣದಲ್ಲಿಬದುಕಿನ ಸಾರ್ಥಕತೆ ಕಂಡುಕೊಳ್ಳುವುದು ಮುಖ್ಯ. ದುಃಖದಲ್ಲಿರುವವರಿಗೆ ಸದಾ ನೆರವಾಗುವ ಅವರ ಬದುಕು ನಿಜಕ್ಕೂ ಸಾರ್ಥಕ ಎಂದು ಹೇಳಿದ್ದಾರೆ.
ಕೇವಲ ಜವಳಿ ಕೇಂದ್ರವಾಗಿದ್ದ ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ ಕೀರ್ತಿ ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ. ಬಾಪೂಜಿ ವಿದ್ಯಾಸಂಸ್ಥೆ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿ ಸಹಸ್ರಾರು ಜನರ ಬದುಕಿಗೆ ದಾರಿದೀಪವಾಗಿದ್ದರು. ಉದ್ಯಮಿಯಾಗಿ, ಕೈಗಾರಿಕೋದ್ಯಮಿಯಾಗಿ, ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾಗಿ, ರಾಜಕಾರಣಿಯಾಗಿ ಸುದೀರ್ಘ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಮಹಾನ್ ಚೇತನ ಶಾಮನೂರು ಶಿವಶಂಕರಪ್ಪನವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗ ಹಾಗೂ ಅಭಿಮಾನಿವರ್ಗಕ್ಕೆ ದೊರೆಯಲಿ ಎಂದರು. ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಶಾಮನೂರು ಶಿವಶಂಕರಪ್ಪ ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವದವರು. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. 95 ವರ್ಷದವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದ ಶಾಮನೂರು ಶಿವಶಂಕರಪ್ಪ, ಇಡೀ ಭಾರತದಲ್ಲಿದಾಖಲೆ







