ಮೈಸೂರು : ಜಿಲ್ಲೆಯ ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಇಡೀ ದೇಶದ ರಂಗಾಸಕ್ತರು ಕಾತರದಿಂದ ಎದುರು ನೋಡುತ್ತಿರುತ್ತಾರೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಜನವರಿ 11 ರಿಂದ 18ರ ವರೆಗೆ ನಡೆಯಲಿದೆ.
‘ಬಹುರೂಪಿಗೆ ಈ ವರ್ಷ 25 ವರ್ಷ ತುಂಬಲಿದೆ. ಬಹುರೂಪಿ ಇದು ರಾಷ್ಟ್ರೀಯ ನಾಟಕೋತ್ಸವ. ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯದಲ್ಲಿ ಸಮತೆಯಡೆಗೆ ನಡಿಗೆ ಎಂಬ ಟ್ಯಾಗ್ ಲೈನ್ನಲ್ಲಿ ಇಡೀ ಹಬ್ಬವನ್ನು ಆಯೋಜನೆ ಮಾಡಿಕೊಂಡಿದ್ದೇವೆ’ ಎಂದರು.
‘ಈ ನಾಟಕೋತ್ಸವಕ್ಕೆ ದೇಶದ ಬೇರೆ ಬೇರೆ ಭಾಗಗಳ, ಬೇರೆ ಬೇರೆ ಭಾಷೆಯ ಹಲವಾರು ನಾಟಕಗಳು ಬರುತ್ತವೆ. ಈ ವರ್ಷ ಸುಮಾರು 24 ನಾಟಕಗಳು ಪ್ರದರ್ಶನವಾಗುತ್ತವೆ. ಅದರಲ್ಲಿ ಮಣಿಪುರಿ, ಅಸ್ಸಾಮೀಸ್, ಮಲಯಾಳಂ, ತಮಿಳು, ಇಂಗ್ಲಿಷ್, ತಮಿಳು, ಮರಾಠಿ ಹಾಗೂ ಕನ್ನಡವೂ ಸೇರಿದಂತೆ ಒಟ್ಟು 24 ನಾಟಕಗಳು ಪ್ರದರ್ಶನಗೊಳ್ಳಲಿವೆ. ಕಳೆದ ವರ್ಷದಿಂದ ಬಹುರೂಪಿಗೆ ಮಕ್ಕಳ ಬಹುರೂಪಿಯನ್ನು ಸೇರ್ಪಡೆ ಮಾಡಿದ್ದೇವೆ. ಮಕ್ಕಳಿಗಾಗಿ ಆರು ನಾಟಕಗಳ ಪ್ರದರ್ಶನಗಳು ಇರುತ್ತವೆ. ಅಲ್ಲದೇ, ರಾಷ್ಟ್ರೀಯ ಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವಗಳನ್ನು ಆಯೋಜಿಸುತ್ತಿದ್ದೇವೆ. ಜನಪದ ಉತ್ಸವ, ವಸ್ತು ಪ್ರದರ್ಶನ, ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತಾದ ಛಾಯಾಚಿತ್ರ ಪ್ರದರ್ಶನಗಳು ಇರುತ್ತವೆ. ಸಾಕಷ್ಟು ಮಳಿಗೆಗಳು ಕೂಡಾ ಇಲ್ಲಿಗೆ ಬರುತ್ತವೆ’ ಎಂದು ಮಾಹಿತಿ ನೀಡಿದರು.
‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಕ್ಕೆ ಪೂರಕವಾಗಿ ಹಾಗೂ ಅವರು ಬದುಕು, ಬರಹ, ಅಧ್ಯಯನವನ್ನು ಒಳಗೊಂಡು ಸಮಗ್ರ ನೋಟವನ್ನು ಇಟ್ಟುಕೊಳ್ಳಬೇಕೆಂಬುದು ನಮ್ಮ ಆಶಯ. ಇದಕ್ಕೆ ಪೂರಕವಾಗಿ ಜನವರಿ 17 ಹಾಗೂ 18 ರಂದು ಬಹುರೂಪಿಯಲ್ಲಿ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಆಯೋಜಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
‘ಪಂಜಾಬ್ನ ಬಹಳ ಹೆಸರಾಂತ ಗಾಯಕಿ ಗಿನ್ನಿಮಾಯಿ ಅವರ ಕಾರ್ಯಕ್ರಮವನ್ನೂ ಜ. 18ರಂದು ಆಯೋಜಿಸುತ್ತೇವೆ. ಹಾಗಾಗಿ, ಬಹುರೂಪಿ ಈ ವರ್ಷವೂ ವಿಶಿಷ್ಟವಾಗಿ ಆಯೋಜನೆಯಾಗುತ್ತಿದೆ. ಅದಕ್ಕೆ ಬೇಕಾದ ಸಿದ್ಧತೆಗಳೂ ಈಗಾಗಲೇ ಪ್ರಾರಂಭ ಆಗಿವೆ. ಜನವರಿ 11ನೇ ತಾರೀಖು ಚಲನಚಿತ್ರೋತ್ಸವ ಹಾಗೂ ಜನಪದ ಉತ್ಸವದ ಉದ್ಘಾಟನೆ ಆಗಲಿದೆ. 12ನೇ ತಾರೀಖು ಮಕ್ಕಳ ಬಹುರೂಪಿ ಉದ್ಘಾಟನೆ ಆಗಲಿದೆ. ಮತ್ತೆ ಸಂಜೆ ಒಟ್ಟು ಬಹುರೂಪಿ ನಾಟಕದ ಉದ್ಘಾಟನೆ ಆಗಲಿದೆ’ ಎಂದು ತಿಳಿಸಿದ್ದಾರೆ.







