ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮಾಜಿ ಸಚಿವ, ಹಾಲಿ ಶಾಸಕ ಹೆಚ್.ಡಿ.ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಿಗಿ ರಿಲೀಫ್ ನೀಡಿದೆ.
ಪ್ರಕರಣ ಕುರಿತು ಸೋಮವಾರ ವಿಚಾರಣೆ ನಡೆಸಿದ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು, ವಿಳಂಬವಾಗಿ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354 ಎ ಅಡಿ ಮಾಡಲಾದ ಆರೋಪವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದ್ದಾರೆ. ಹೀಗಾಗಿ ರೇವಣ್ಣ ವಿರುದ್ಧ ದಾಖಲಿಸಿದ್ದ ಐಪಿಸಿ ಸೆಕ್ಷನ್ 354 ಎ(ಲೈಂಗಿಕ ದೌರ್ಜನ್ಯ) ಅಡಿಯ ಆರೋಪವನ್ನು ಕೈಬಿಡಲಾಗಿದೆ.
ಈ ಪ್ರಕರಣ ಸಂಬಂಧ ಈ ಹಿಂದೆ ಆರೋಪಿ ಹೆಚ್.ಡಿ.ರೇವಣ್ಣ ವಿರುದ್ಧ ಮಾಡಲಾಗಿದ್ದ ಐಪಿಸಿ ಸೆಕ್ಷನ್ 354(ಲೈಂಗಿಕ ದೌರ್ಜನ್ಯ) ಅಡಿಯ ಆರೋಪವನ್ನು ಹೈಕೋರ್ಟ್ ಕೈ ಬಿಟ್ಟಿತ್ತು. ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐಪಿಸಿ ಸೆಕ್ಷನ್ 354 ಎ ಅಡಿ ಮಾಡಲಾದ ಆರೋಪವನ್ನು ಕೈಬಿಟ್ಟಿದೆ. ಸಿಐಡಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಸಲ್ಲಿಸಿದ್ದ ದೋಷಾರೋಪದಿಂದ ರೇವಣ್ಣ ಬಿಡುಗಡೆಗೊಂಡಂತಾಗಿದೆ.
ಇದೇ ಪ್ರಕರಣದಲ್ಲಿ ಮಾಜಿ ಸಂಸದ ಹಾಗೂ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ 2ನೇ ಆರೋಪಿಯಾಗಿದ್ದಾರೆ. ಇವರ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಸೇರಿ ಹಲವು ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ. ಪ್ರಜ್ವಲ್ ವಿರುದ್ಧದ ಆರೋಪಗಳ ಸಂಬಂಧ ವಿಚಾರಣೆ ನ್ಯಾಯಾಲಯದಲ್ಲಿ ಪ್ರಗತಿಯಲ್ಲಿದೆ.
ಪ್ರಕರಣದ ಹಿನ್ನೆಲೆ:
ದೂರುದಾರೆ ಸಂತ್ರಸ್ತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಶಿಫಾರಸ್ಸಿನ ಮೇರೆಗೆ ಹೊಳೆನರಸೀಪುರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 2019ರಿಂದ 2022ರ ಅವಧಿಯಲ್ಲಿ ಗುತ್ತಿಗೆ ಆಧಾರದಡಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹೊಳೆನರಸೀಪುರದ ಹೆಚ್.ಡಿ.ರೇವಣ್ಣ ಅವರ ಮನೆಗೆಲಸಕ್ಕೂ ಬಳಸಿಕೊಳ್ಳುತ್ತಿದ್ದರು. 2020ರಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆಲಸ ಮಾಡುತ್ತಿದ್ದ ಸಂತ್ರಸ್ತೆಗೆ ಕಿರುಕುಳ ನೀಡಿದ ಆರೋಪ ರೇವಣ್ಣ ವಿರುದ್ಧ ಕೇಳಿ ಬಂದಿತ್ತು. ಅಲ್ಲದೆ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೂಡ ಈಕೆ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪವಿದೆ.
ಈ ಸಂಬಂಧ ಸಂತ್ರಸ್ತೆ 2024ರ ಏಪ್ರಿಲ್‌ನಲ್ಲಿ ಹೆಚ್.ಡಿ.ರೇವಣ್ಣ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕನ್ಷ್ 354 ಮತ್ತು 354 ಎ ಅಡಿ ಎಫ್‌ಐಆರ್ ದಾಖಲಿಸಿದ್ದರು.
ಬಳಿಕ ಪ್ರಕರಣವು ಸಿಐಡಿ ಎಸ್‌ಐಟಿಗೆ ವರ್ಗಾವಣೆಯಾಗಿತ್ತು. ಬಳಿಕ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ನಂತರ ಪ್ರಜ್ವಲ್ ರೇವಣ್ಣನನ್ನು ಬಂಧಿಸಲಾಗಿತ್ತು. ಬಳಿಕ ಎಸ್ಐಟಿ ಅಧಿಕಾರಿಗಳು ಈ ಇಬ್ಬರು ಆರೋಪಿಗಳ ಕುರಿತು ತನಿಖೆ ನಡೆಸಿ ಸಂತ್ರಸ್ತೆ ಹೇಳಿಕೆ, 150ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ, ಕೆಲ ಸಾಕ್ಷ್ಯಾಧಾರಗಳು ಒಳಗೊಂಡಂತೆ ಸುಮಾರು 2,144 ಪುಟಗಳ ದೋಷಾರೋಪಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.







