ಕನ್ನಡಿಗನೇ ಇಲ್ಲಿ ಸಾರ್ವಭೌಮ. ಕನ್ನಡಕ್ಕೆ ತೊಂದರೆ ಕೊಡೋವರಿಗೆ ಈ ನಾಡಿನಲ್ಲಿ ಜಾಗವೇ ಇಲ್ಲ” ಎಂದು ಯುವ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ಸ್ಫೂರ್ತಿದಾಯಕವಾಗಿ ಘೋಷಿಸಿದ್ದಾರೆ. ಅವರು ದಶಕಗಳ ಹಿಂದಿನಿಂದ ಕನ್ನಡ ಪರ ಹೋರಾಟ ನಡೆಸುತ್ತಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಎಷ್ಟೇ ಕೇಸ್‌ಗಳು ಬರುವುದಾದರೂ ಜಗ್ಗದೆ, ಕನ್ನಡಕ್ಕಾಗಿ ನಿರಂತರ ಹೋರಾಡಿರುವ ಹೋರಾಟಗಾರ ಎಂಬುದರಲ್ಲಿ ಸಂದೇಹವಿಲ್ಲ.
ಮೂಲತಃ ಮೈಸೂರಿನಿಂದ ಬಂದಿರುವ ರೂಪೇಶ್ ರಾಜಣ್ಣ, ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಸಿನಿಮಾದಲ್ಲೂ ಆಸಕ್ತಿ ಇತ್ತು, ಆದರೆ ಜನಪರ ಹೋರಾಟದ ದಾರಿಗೆ ಧೃಢ ನಿರ್ಣಯದೊಂದಿಗೆ ಕಾಲಿಟ್ಟರು. ಯುವ ಕರ್ನಾಟಕ ವೇದಿಕೆಯ ಮೂಲಕ ತಮ್ಮ ಹೋರಾಟದ ವೇದಿಕೆಯನ್ನು ರೂಪಿಸಿಕೊಂಡು, ಕನ್ನಡ ಪರ ಧ್ವನಿಯನ್ನು ಎತ್ತಲು ಪ್ರಾರಂಭಿಸಿದರು.
“ನನ್ನ ರಕ್ತದ ಪ್ರತಿಯೊಂದು ಹನಿಯಲ್ಲೂ ಹೋರಾಟವಿದೆ,” ಎನ್ನುತ್ತಾರೆ ರಾಜಣ್ಣ. ಅವರಿಗೆ ತೊಂದರೆ ಉಂಟಾದರೂ ಹಿಂದೇಟು ಇಲ್ಲ. ಕನ್ನಡಿಗರಿಗೆ ಆಗುವ ಯಾವುದೇ ಅನ್ಯಾಯವನ್ನು ತಡೆಯಲು ಯಾವ ಪರಿಸ್ಥಿತಿಯನ್ನೂ ಪರಿಗಣಿಸದೇ ಅವರು ಮೊದಲು ಮುಂದೆ ನಿಲ್ಲುತ್ತಾರೆ.
ಅವರು ಒಂದು ಚಿತ್ರವನ್ನೇ ಕನ್ನಡ ವಿರೋಧಿ ಅಂಶಗಳ ಹಿನ್ನೆಲೆಯಲ್ಲಿ ಬ್ಯಾನ್ ಮಾಡಿಸಿದ್ದಾರೆ ಎಂಬುದು ಅವರ ಹೋರಾಟದ ಶಕ್ತಿ ಮತ್ತು ಪರಿಣಾಮವನ್ನು ತೋರಿಸುತ್ತದೆ. ಅವರ ಈ ಹೋರಾಟದ ಯಾನ ಹಾಗೂ ಜೀವನ ಕಥೆಯನ್ನು ವಿಜಯ ಕರ್ನಾಟಕ ನಡೆಸಿದ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಅವರು ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ.







