ನವದೆಹಲಿ: ಬೆಹರೈನ್, ಕತಾರ್ ಹಾಗೂ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಆತಂಕ ಹಾಗೂ ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಯ ಕುರಿತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಸಂಸದ ಡಾ. ಸಿ.ಎನ್. ಮಂಜುನಾಥ್ ಅವರೊಂದಿಗೆ ಸಂಸತ್ ಭವನದಲ್ಲಿ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಅನಿವಾಸಿ ಕನ್ನಡಿಗರ ಸುರಕ್ಷತೆಯ ಬಗ್ಗೆ ತುರ್ತು ಗಮನಹರಿಸುವಂತೆ ಮನವಿ ಸಲ್ಲಿಸಿದರು.
ಸಚಿವರ ಭರವಸೆ ಮತ್ತು ಕೈಗೊಂಡ ಕ್ರಮಗಳು:
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಈ ವಿಷಯದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಕೆಳಗಿನ ಅಂಶಗಳನ್ನು ಹಂಚಿಕೊಂಡಿದ್ದಾರೆ:
ವಿಶೇಷ ನಿಗಾ: ಯುದ್ಧ ಪೀಡಿತ ಪ್ರದೇಶಗಳ ವಿಮಾನ ನಿಲ್ದಾಣಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಪರ್ಯಾಯ ಮಾರ್ಗಗಳ ಬಗ್ಗೆ ಪ್ರಯತ್ನಿಸಲಾಗುತ್ತಿದೆ.
ಆತಂಕ ಬೇಡ: ವಿದೇಶದಲ್ಲಿರುವ ಭಾರತೀಯರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪೂರ್ಣ ಕಾಳಜಿಯಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ.
ರಕ್ಷಣೆಗೆ ಬದ್ಧತೆ: ಯಾವುದೇ ಹಂತದಲ್ಲೂ ಪ್ರತಿಯೊಬ್ಬ ಭಾರತೀಯನ ರಕ್ಷಣೆ ಮತ್ತು ಸುರಕ್ಷತೆಗೆ ಭಾರತ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ನಾಯಕರ ಮೆಚ್ಚುಗೆ:
ಸಭೆಯ ನಂತರ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಅವರು, “ಡಾ. ಜೈಶಂಕರ್ ಅವರಂತಹ ಪ್ರತಿಭಾವಂತ ಮತ್ತು ದಕ್ಷ ಮಂತ್ರಿಗಳು ಭಾರತೀಯರ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವುದು ನಮಗೆ ಅರಿವಾಗಿದೆ. ಅನಿವಾಸಿ ಕನ್ನಡಿಗರ ಬೇಡಿಕೆಗಳಿಗೆ ಅವರು ಸ್ಪಂದಿಸಿದ ರೀತಿ ಆಶಾದಾಯಕವಾಗಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.








