ಬೆಂಗಳೂರು: “ಸಹಕಾರ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಶ್ರೀ ಬಿ.ಎಲ್. ಲಕ್ಕೇಗೌಡರು ಸಲ್ಲಿಸಿದ ಸೇವೆ ಅನನ್ಯವಾದುದು. ಅವರ ಸಾಧನೆಗಳು ನಾಡಿನ ಜನಮಾನಸದಲ್ಲಿ ಸದಾ ಕಾಲ ಹಸಿರಾಗಿರುತ್ತವೆ,” ಎಂದು ಮಾಗಡಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಚ್.ಸಿ. ಬಾಲಕೃಷ್ಣ ಅವರು ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಮಂದಿರದಲ್ಲಿ ಬಿ.ಎಲ್. ಲಕ್ಕೇಗೌಡ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಲಕ್ಕೇಗೌಡರ 91ನೇ ಜನ್ಮದಿನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಳೆಯ ನೆನಪುಗಳ ಮೆಲುಕು:
ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ಸ್ಮರಿಸಿದ ಶಾಸಕರು, “ನಾನು ಪ್ರಥಮ ಬಾರಿಗೆ 1994ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ದಿವಂಗತ ಲಕ್ಕೇಗೌಡರು ನೀಡಿದ ಬೆಂಬಲ ಮತ್ತು ಸಹಾಯವನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ,” ಎಂದು ಭಾವುಕರಾಗಿ ನುಡಿದರು.
ದಿವ್ಯ ಸಾನಿಧ್ಯ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರಶಸ್ತಿ ಪ್ರದಾನ: ಈ ವರ್ಷದ ಲಕ್ಕೇಗೌಡರ ಸ್ಮರಣಾರ್ಥ ಪ್ರಶಸ್ತಿಯನ್ನು ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಎ. ದೇವೇಗೌಡ ಅವರಿಗೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್ ಅವರಿಗೆ ನೀಡಿ ಗೌರವಿಸಲಾಯಿತು.
ಗೌರವ: ಬೆಳಗವಾಡಿ ಗ್ರಾಮದ ಪುತ್ರರಾದ ಲಕ್ಕೇಗೌಡರು ತಾಲ್ಲೂಕಿನ ಪ್ರಗತಿಗೆ ನೀಡಿದ ಕೊಡುಗೆಯನ್ನು ಸಮಾರಂಭದಲ್ಲಿ ಸ್ಮರಿಸಲಾಯಿತು.







