ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಬೂದುಬಾಳು ವೆಂಕಟರಮಣ ಸ್ವಾಮಿ ರಥೋತ್ಸವವು ಇಂದು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ವರುಷಕ್ಕೊಮ್ಮೆ ನಡೆಯುವ ಈ ವೈಭವದ ರಥೋತ್ಸವಕ್ಕೆ ಸಾಕ್ಷಿಯಾಗಲು ವಿವಿಧ ಜಿಲ್ಲೆ ಹಾಗೂ ಊರುಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು.
ರಥೋತ್ಸವ ಸಾಗುವ ಹಾದಿಯುದ್ದಕ್ಕೂ ಭಕ್ತಾದಿಗಳು “ಗೋವಿಂದ ಗೋವಿಂದ” ಎಂಬ ನಾಮಸ್ಮರಣೆ ಮಾಡುತ್ತಾ ಭಕ್ತಿ ಮೆರೆದರು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಹಣ್ಣು-ಜವನ ಎಸೆಯುವ ಮೂಲಕ ಹರಕೆ ಸಮರ್ಪಿಸಿ, ಕಣ್ತುಂಬಿಕೊಂಡರು. ಇಡೀ ಬೂದುಬಾಳು ಗ್ರಾಮವು ಹಬ್ಬದ ವಾತಾವರಣದಿಂದ ಕಳೆಗಟ್ಟಿತ್ತು.
ಹನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ.ಆರ್. ಮಂಜುನಾಥ್ ಅವರು ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, “ಸಮಸ್ತ ಜನರಿಗೂ ವೆಂಕಟರಮಣ ಸ್ವಾಮಿ ಒಳ್ಳೆಯದು ಮಾಡಲಿ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಮತ್ತು ಶಾಂತಿಯನ್ನು ಮೂಡಿಸುತ್ತವೆ,” ಎಂದು ಹಾರೈಸಿದರು.
ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನ ಸಮಿತಿಯ ವತಿಯಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು:
ಅನ್ನಸಂತರ್ಪಣೆ: ಭಕ್ತಾದಿಗಳಿಗಾಗಿ ನಿರಂತರ ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಮೂಲಸೌಕರ್ಯ: ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಭದ್ರತೆಯ ದೃಷ್ಟಿಯಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೈತ್ರಾ, ಪ್ರಮುಖ ಮುಖಂಡರಾದ ಮಂಜೇಶ್, ಸಿಂಗನಲ್ಲೂರು ರಾಜಣ್ಣ, ದೇವಸ್ಥಾನದ ಅರ್ಚಕರುಗಳು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.







