ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಇಂದಿನ ಅಗತ್ಯ: ಕಾರ್ಕಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದನೆ

ಕಾರ್ಕಳ: “ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಶಿಕ್ಷಣದ ಮೂಲ ಉದ್ದೇಶವಾಗಬೇಕು. ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಒಳಗೊಂಡ ಶಿಕ್ಷಣ ಇಂದಿನ ತುರ್ತು ಅಗತ್ಯವಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದ ಕಿಸಾನ್ ಸಭಾ ಟ್ರಸ್ಟ್‌ನ ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೀರಪ್ಪ ಮೊಯ್ಲಿ ಅವರ ಸೇವೆಗೆ ಶ್ಲಾಘನೆ:

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಸಿಎಂ, “ನಾನು ಕುಟುಂಬದ ಮೊದಲ ಪದವೀಧರ. ವೀರಪ್ಪ ಮೊಯ್ಲಿ ಅವರಂತೆ ನಾನೂ ಕಷ್ಟದ ಜೀವನ ಕಂಡು ಬಂದವನು. ಮೊಯ್ಲಿ ಅವರು ವಕೀಲರಾಗಿದ್ದಾಗ ಬಡವರಿಗೆ ಉಚಿತವಾಗಿ ನ್ಯಾಯ ಒದಗಿಸುತ್ತಿದ್ದರು. ಕಾರ್ಕಳದಲ್ಲಿ ಪ್ರೌಢಶಾಲೆ ಸ್ಥಾಪಿಸಿ ನಿರ್ಗತಿಕ ಮಕ್ಕಳಿಗೆ ಅಕ್ಷರ ದಾಸೋಹ ಮಾಡುತ್ತಿರುವುದು ಶ್ಲಾಘನೀಯ,” ಎಂದರು.

ಸರ್ಕಾರದ ಸಾಧನೆಗಳ ಅನಾವರಣ:

ನುಡಿದಂತೆ ನಡೆದ ಸರ್ಕಾರ: “2013ರಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158 ಅನ್ನು ಈಡೇರಿಸಿದ್ದೇವೆ. ಈಗಿನ ಅವಧಿಯಲ್ಲಿ ನೀಡಿರುವ 590 ಭರವಸೆಗಳ ಪೈಕಿ ಎರಡೂವರೆ ವರ್ಷಗಳಲ್ಲಿ 243 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ” ಎಂದು ಹೆಮ್ಮೆಯಿಂದ ಹೇಳಿದರು.

ಗ್ಯಾರಂಟಿ ಯೋಜನೆಗಳ ಯಶಸ್ಸು: ರಾಜ್ಯದ ಎಲ್ಲ ಜಾತಿ, ಧರ್ಮಗಳ ಬಡವರಿಗೆ ಗ್ಯಾರಂಟಿ ಸವಲತ್ತು ತಲುಪುತ್ತಿದೆ. ವರ್ಷಕ್ಕೆ 52,000 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಇದುವರೆಗೆ ಒಟ್ಟು 1.20 ಲಕ್ಷ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗಾಗಿ ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಪತ್ತಿನ ಸಮಾನ ಹಂಚಿಕೆ: ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದು ನಮ್ಮ ಸರ್ಕಾರದ ಗುರಿ ಎಂದು ಅವರು ಸ್ಪಷ್ಟಪಡಿಸಿದರು.

ಮಹಾಮಸ್ತಕಾಭಿಷೇಕಕ್ಕೆ ಸರ್ಕಾರದ ಬೆಂಬಲ:

2027ರಲ್ಲಿ ಕಾರ್ಕಳದಲ್ಲಿ ನಡೆಯಲಿರುವ ಐತಿಹಾಸಿಕ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಸರ್ಕಾರವು ಆರ್ಥಿಕ ಸಹಾಯ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಶಿಕ್ಷಣದ ಕುರಿತು ಅಂಬೇಡ್ಕರ್ ಚಿಂತನೆ:

“ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಅಸಮಾನ ಸಮಾಜದಲ್ಲಿ ಶೂದ್ರ ವರ್ಗ ಅಕ್ಷರದಿಂದ ವಂಚಿತವಾಗಿತ್ತು. ಈಗ ಸಮಾನ ಅವಕಾಶಗಳನ್ನು ನೀಡುವುದು ನಮ್ಮ ಆದ್ಯತೆ” ಎಂದು ಅವರು ಆಶಯ ವ್ಯಕ್ತಪಡಿಸಿದರು.

ಈ ಮಹತ್ವದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೋಯ್ಲಿ ಸೇರಿದಂತೆ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  • Related Posts

    ಮುಳ್ಳೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ: ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗಿ

    ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮಹೋತ್ಸವವನ್ನು ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ಆಚರಿಸಲಾಯಿತು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ…

    Continue reading
    ಶಾಸಕ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್

    ಬೆಂಗಳೂರು: ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಹೊಸೂರು ಮುಖ್ಯರಸ್ತೆಯ ಕೊನಪ್ಪನ ಅಗ್ರಹಾರದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಹಿರಿಯೂರು ಶಾಸಕ ಶ್ರೀ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯನ್ನು…

    Continue reading

    Leave a Reply

    Your email address will not be published. Required fields are marked *