ಕೆ ಆರ್ ನಗರ: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಮತ್ತು ಆಂತರಿಕ ಕಲಹಗಳ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. “ಗ್ಯಾರಂಟಿಗಳ ಹೆಸರಿನಲ್ಲಿ ಎರಡುವರೆ ವರ್ಷ ಕಳೆದ ಸರ್ಕಾರ, ಮುಂದಿನ ಎರಡುವರೆ ವರ್ಷಗಳನ್ನು ಮುಖ್ಯಮಂತ್ರಿ ಕುರ್ಚಿಯ ಜಗಳದಲ್ಲೇ ಕಳೆಯಲಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಸರ್ಕಾರದ ವಿರುದ್ಧದ ಪ್ರಮುಖ ಆರೋಪಗಳು:
ನೇಮಕಾತಿಗಳ ನಿರ್ಲಕ್ಷ್ಯ: ಕೃಷಿ ಮತ್ತು ಪಶುಸಂಗೋಪನೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ, ಸರ್ಕಾರ ನೇಮಕಾತಿಗೆ ಆದ್ಯತೆ ನೀಡುತ್ತಿಲ್ಲ. ಯುವಕರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಿಗೆ ವಂಚನೆ: ಉತ್ತರ ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯುತ್ತಿರುವ ಯುವಕರಿಗೆ ಬಿಲ್ಡಿಂಗ್ ಕಟ್ಟಿಸಿದ್ದರೂ, ಅವರಿಗೆ ಸ್ಕಾಲರ್‌ಶಿಪ್ ನೀಡದೆ ಬೀದಿಗೆ ತಂದು ನಿಲ್ಲಿಸಲಾಗಿದೆ.
ಭ್ರಷ್ಟಾಚಾರದ ದಾಖಲೆ: “40% ಕಮಿಷನ್ ಎಂದು ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡಿ 136 ಸೀಟು ಗೆದ್ದವರು, ಈಗ ಗುತ್ತಿಗೆದಾರರ ಸಂಘದಿಂದಲೇ ಪರ್ಸೆಂಟೇಜ್ ಆರೋಪ ಎದುರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪ್ರಾಮಾಣಿಕತೆ ಇದ್ದರೆ ಗುತ್ತಿಗೆದಾರರ ಆರೋಪದ ಬಗ್ಗೆ ಕ್ರಮ ಕೈಗೊಳ್ಳಲಿ” ಎಂದು ಸವಾಲು ಹಾಕಿದರು.
ಗ್ಯಾರಂಟಿ ಎಂಬ ಹೊರೆ: “ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಈಗ ಗ್ಯಾರಂಟಿಗಳು ಹೊರೆ ಎನ್ನುತ್ತಿದ್ದಾರೆ. ಆ ಹಣವನ್ನು ಆಸ್ಪತ್ರೆ, ಶಾಲೆಗಳ ಅಭಿವೃದ್ಧಿಗೆ ಬಳಸಿದ್ದರೆ ರಾಜ್ಯದ ಚಿತ್ರಣವೇ ಬದಲಾಗುತ್ತಿತ್ತು. ಇಂದು ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ, ಇದ್ದರೂ ಅವು ಅವಧಿ ಮುಗಿದ (Expired) ಔಷಧಿಗಳಾಗಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಕುರ್ಚಿಯ ಡ್ರಾಮಾ:
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಅಥವಾ ಪರಮೇಶ್ವರ್ ಅವರಿಗೆ ಸಿಎಂ ಪಟ್ಟ ನೀಡಬೇಕೆಂಬ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇವೆಲ್ಲವೂ ಕೇವಲ ಪರದೆ ಮೇಲೆ ನಡೆಯುತ್ತಿರುವ ಡ್ರಾಮಾಗಳು. ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಒಂದೊಂದು ಹೆಸರನ್ನು ಮುಂದು ಬಿಡಲಾಗುತ್ತಿದೆ ಹೊರತು ಇದ್ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ” ಎಂದರು.
ಮುಂದಿನ ಸಿಎಂ ಕುರಿತು ಮಾತು:
ಜನರು ನಿಮ್ಮನ್ನು ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಸಿಎಂ ಆಗುವುದು ಮುಖ್ಯವಲ್ಲ, ಈ ಕೆಟ್ಟ ಸರ್ಕಾರವನ್ನು ತೊಲಗಿಸುವುದು ನನ್ನ ಮೊದಲ ಗುರಿ. ಅದಕ್ಕಾಗಿ ಮೈತ್ರಿ ಪಕ್ಷದ ಮಿತ್ರರೊಂದಿಗೆ ಹೋರಾಟ ಮಾಡುತ್ತೇನೆ. ಅಧಿಕಾರ ಅನ್ನೋದು ವಿಧಿಬರಹ, ಅದು ದೇವರಿಗೆ ಬಿಟ್ಟಿದ್ದು” ಎಂದು ಮಾರ್ಮಿಕವಾಗಿ ನುಡಿದರು.
ಪರೀಕ್ಷಾ ಅಕ್ರಮಗಳ ಬಗ್ಗೆ ಕಿಡಿ:
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಪ್ರಶ್ನೆ ಪತ್ರಿಕೆ ಲೀಕ್ ಆಗುವುದು ಸರ್ಕಾರದ ಅಸಮರ್ಥತೆಗೆ ಸಾಕ್ಷಿ. ನನ್ನ ಆಡಳಿತಾವಧಿಯಲ್ಲಿ ಇಂತಹ ಯಾವುದೇ ಹಗರಣಗಳು ನಡೆಯಲು ಬಿಟ್ಟಿರಲಿಲ್ಲ. ಒಳಗಿರುವವರೇ ಇಂತಹ ಕೆಲಸಗಳಿಗೆ ಮೂಲಪುರುಷರಾಗಿರುತ್ತಾರೆ” ಎಂದು ಆರೋಪಿಸಿದರು.
“ದೇವರಾಜ ಅರಸು ಅವರ ದಾಖಲೆ ಮುರಿಯುತ್ತೇವೆ ಎನ್ನುವವರು, ಅಧಿಕಾರದಲ್ಲಿದ್ದಾಗ ಜನರ ಸಮಸ್ಯೆಗಳಿಗೆ ಏನು ಪರಿಹಾರ ಕೊಟ್ಟಿದ್ದೇವೆ ಎನ್ನುವುದನ್ನು ಯೋಚಿಸಬೇಕು. ಡ್ರಾಮಾಗಳನ್ನು ಬಿಟ್ಟು ಜನಪರ ಆಡಳಿತ ಕೊಡಿ.” — ಹೆಚ್.ಡಿ. ಕುಮಾರಸ್ವಾಮಿ







