ತುಮಕೂರು: ತ್ರಿವಿಧ ದಾಸೋಹಿ, ಪರಮಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಮಹಾಶಿವಯೋಗಿಗಳವರ 7ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ, ದೇಶದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಇಂದು ಸಿದ್ದಗಂಗಾ ಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದರು.
ಸಿದ್ದಗಂಗಾ ಮಠದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಈ ಮಹತ್ವದ ಸಭೆ ಜರುಗಿತು.
ಸಿದ್ಧತೆಗಳ ಪರಿಶೀಲನೆ:
ಉಪರಾಷ್ಟ್ರಪತಿಗಳ ಭೇಟಿಯ ಸಂದರ್ಭದಲ್ಲಿ ಯಾವುದೇ ಲೋಪದೋಷಗಳು ಆಗದಂತೆ ಮತ್ತು ಸ್ಮರಣೋತ್ಸವ ಕಾರ್ಯಕ್ರಮವು ಅತ್ಯಂತ ವ್ಯವಸ್ಥಿತವಾಗಿ ನಡೆಯುವಂತೆ ಸಭೆಯಲ್ಲಿ ಚರ್ಚಿಸಲಾಯಿತು. ಭದ್ರತೆ, ಶಿಷ್ಟಾಚಾರ (Protocol) ಮತ್ತು ಮಠಕ್ಕೆ ಬರುವ ಭಕ್ತಾದಿಗಳಿಗೆ ಕಲ್ಪಿಸಬೇಕಾದ ಸೌಲಭ್ಯಗಳ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಶ್ರೀ ಸುರೇಶ್ ಗೌಡ, ಶಾಸಕರು, ಶ್ರೀ ಜ್ಯೋತಿ ಗಣೇಶ್, ಶಾಸಕರು, ಶ್ರೀ ರವಿ ಹೆಬ್ಬಾಕ, ಬಿಜೆಪಿ ಜಿಲ್ಲಾಧ್ಯಕ್ಷರು, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ಕೈಗೊಳ್ಳಲಾಗಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.







