ಬೆಂಗಳೂರು: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದ ಯುವತಿ ಮಾನ್ಯ ಎಂಬಾಕೆಯ ಮರ್ಯಾದಾಗೇಡು ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಸಂತ್ರಸ್ತ ಕುಟುಂಬಕ್ಕೆ ಶೀಘ್ರ ನ್ಯಾಯ ಒದಗಿಸಲು ಈ ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಪ್ರಕರಣದ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
60 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ: ಇದು ದಲಿತರ ಮೇಲಿನ ದೌರ್ಜನ್ಯ ಮತ್ತು ಕೊಲೆ ಪ್ರಕರಣವಾಗಿದ್ದು, ಅಟ್ರಾಸಿಟಿ ಕಾಯ್ದೆಯಡಿ ದಾಖಲಾಗಿದೆ. ನಿಯಮದಂತೆ ಘಟನೆ ನಡೆದ 60 ದಿನಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (Charge Sheet) ಸಲ್ಲಿಸಬೇಕಾಗಿದೆ. ಈ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಿಶೇಷ ಪ್ರಾಸಿಕ್ಯೂಟರ್ ನೇಮಕ: ಪ್ರಕರಣವನ್ನು ಸಮರ್ಥವಾಗಿ ವಾದಿಸಲು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರವು ವಿಶೇಷ ಖಾಸಗಿ ಪ್ರಾಸಿಕ್ಯೂಟರ್‌ರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.
ಮರ್ಯಾದಾಗೇಡು ಹತ್ಯೆ ತಡೆಗೆ ಹೊಸ ಕಾನೂನು: “ಹೆಣ್ಣುಮಗಳ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಬಲವಂತ ಮಾಡುವುದು, ಜಾತಿಯಾಧಾರಿತ ಹಿಂಸೆ ಹಾಗೂ ಮರ್ಯಾದಾಗೇಡು ಹತ್ಯೆಗಳು ಮಾನವ ಸಮಾಜವೇ ತಲೆತಗ್ಗಿಸುವಂತ ಹೀನ ಕೃತ್ಯಗಳಾಗಿವೆ,” ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಮತ್ತು ಜನರಲ್ಲಿ ಕಾನೂನಿನ ಭಯ ಹುಟ್ಟಿಸಲು ವಿಶೇಷ ಕಾನೂನು ರಚಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಅಧಿವೇಶನದಲ್ಲಿ ಚರ್ಚೆ: ಮರ್ಯಾದಾಗೇಡು ಹತ್ಯೆ ತಡೆಗೆ ಹೊಸ ಕಾನೂನು ರೂಪಿಸುವ ಕುರಿತು ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
“ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇಂತಹ ಕ್ರೌರ್ಯವನ್ನು ಸಹಿಸುವುದಿಲ್ಲ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಮೊದಲ ಆದ್ಯತೆ.” – ಸಿದ್ದರಾಮಯ್ಯ, ಮುಖ್ಯಮಂತ್ರಿಗಳು.







