ಕುಶಾಲನಗರ: ಪ್ರಕೃತಿಯನ್ನು ದೈವಿಕವಾಗಿ ಆರಾಧಿಸುವ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇಗುಲದ ಬಳಿಯ ಕಾವೇರಿ ಆರತಿ ಕ್ಷೇತ್ರದಲ್ಲಿ 181ನೇ ಮಹಾ ಆರತಿ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ನೆರವೇರಿತು.
ಕಾವೇರಿ ಮಹಾ ಆರತಿ ಬಳಗ ಮತ್ತು ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ ಟ್ರಸ್ಟ್ ವತಿಯಿಂದ ಹುಣ್ಣಿಮೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ಪವಿತ್ರ ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ನದಿಗೆ ಆರತಿ ಬೆಳಗಿದರು.
ನದಿ ಮತ್ತು ಪ್ರಕೃತಿಯೊಂದಿಗೆ ಭಾವನಾತ್ಮಕ ಸಂಬಂಧ ಅಗತ್ಯ: ಯದುವೀರ್ ಒಡೆಯರ್
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಯದುವೀರ್ ಒಡೆಯರ್, “ಭಾರತವು ಸಪ್ತ ನದಿಗಳ ಪುಣ್ಯಭೂಮಿಯಾಗಿದ್ದು, ಕಾವೇರಿಯನ್ನು ತಾಯಿಯ ರೂಪದಲ್ಲಿ ಆರಾಧಿಸುವುದು ನಮ್ಮ ಸಂಸ್ಕೃತಿ. ಇಂದು ನಾವು ವೇದ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾದ ಪ್ರಕೃತಿಯ ಮಹತ್ವವನ್ನು ಮರೆಯುತ್ತಿದ್ದೇವೆ. ಪ್ರವಾಸೋದ್ಯಮದ ಮೂಲಕ ಅಭಿವೃದ್ಧಿ ಹೊಂದಬೇಕಾದರೂ, ಅದನ್ನು ವಿರೋಧಿಸದೆ ಪರಿಸರಕ್ಕೆ ಹಾನಿಯಾಗದಂತೆ ಸಮರ್ಪಕವಾಗಿ ನಿರ್ವಹಿಸಬೇಕು,” ಎಂದು ತಿಳಿಸಿದರು. ಇದೇ ವೇಳೆ ಧರ್ಮ ಪಾಲನೆಯಲ್ಲಿ ಆರ್ಯವೈಶ್ಯ ಸಮಾಜದ ಮುಂಚೂಣಿ ಪಾತ್ರವನ್ನು ಅವರು ಶ್ಲಾಘಿಸಿದರು.
ನದಿಯ ಸ್ವಚ್ಛತೆ ಮತ್ತು ಕಾನೂನು ಸಂರಕ್ಷಣೆ
ಶ್ರೀ ಸದಾಶಿವ ಸ್ವಾಮೀಜಿ (ಕಿರಿಕೊಡ್ಲಿ ಮಠ): “ಪ್ರಕೃತಿಗೆ ಅಪಚಾರವೆಸಗಿ ಮಾಡುವ ಅಭಿವೃದ್ಧಿ ವಿನಾಶಕ್ಕೆ ದಾರಿಯಾಗುತ್ತದೆ. ನದಿ ಮತ್ತು ಪರಿಸರದ ಸ್ವಚ್ಛತೆಗೆ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು,” ಎಂದು ಕರೆ ನೀಡಿದರು.
ಡಾ. ಮಂತರ್ ಗೌಡ (ಶಾಸಕರು): “ನದಿಗಳ ಅತಿಕ್ರಮಣ ತಡೆಯಲು ‘ಬಫರ್ ಜೋನ್’ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗುವುದು. ರಾಜಕಾರಣಿಗಳು ವೋಟಿನ ಚಿಂತೆ ಬಿಟ್ಟು ಜಲಮೂಲಗಳ ರಕ್ಷಣೆಗೆ ಕಠಿಣ ಕಾನೂನು ತರಬೇಕು,” ಎಂದು ಅಭಿಪ್ರಾಯಪಟ್ಟರು.
ಅಪ್ಪಚ್ಚು ರಂಜನ್ (ಮಾಜಿ ಸಚಿವರು): “ಕಾವೇರಿ ನಮ್ಮ ನಾಡಿನ ಸಂಜೀವಿನಿ. ಕಾವೇರಿ ಉಳಿದರೆ ಮಾತ್ರ ನಮ್ಮ ನಾಡು ಉಳಿಯಲು ಸಾಧ್ಯ,” ಎಂದರು.
ಸಂರಕ್ಷಣೆಯ ಎಚ್ಚರಿಕೆ:
ಕಾವೇರಿ ನದಿ ಸಂರಕ್ಷಣಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, “40 ವರ್ಷಗಳ ಹಿಂದೆ ನೇರವಾಗಿ ಕುಡಿಯಲು ಯೋಗ್ಯವಾಗಿದ್ದ ನೀರು ಇಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ತಂದು ಕುಡಿಯುವ ಸ್ಥಿತಿಗೆ ತಲುಪಿದೆ. ಪ್ರಕೃತಿಯನ್ನು ವಿಕೃತಿಯಾಗಿಸಿರುವ ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು,” ಎಂದು ಆತಂಕ ವ್ಯಕ್ತಪಡಿಸಿದರು
ಕಾವೇರಿ ಆರತಿ ಬಳಗದ ವತಿಯಿಂದ ಸಂಸದ ಒಡೆಯರ್ ಕ್ಷೇತ್ರ ಶಾಸಕ ಮಂತರ್ ಗೌಡ ಸೇರಿದಂತೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅರ್ಚಕರಾದ ಕೃಷ್ಣಮೂರ್ತಿ ಭಟ್, ಗಿರೀಶ್ ಭಟ್, ಮತ್ತು ಯೋಗೇಶ್ ಭಟ್ ನೇತೃತ್ವದಲ್ಲಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿಗೆ ಆರತಿ ಬೆಳಗಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಮಸ್ತ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ವಂದೇ ಮಾತರಂ ರಾಷ್ಟ್ರೀಯ ಗೀತೆಯ 150ನೇ ವರ್ಷದ ಅಂಗವಾಗಿ ಗೀತೆ ಹಾಡಲಾಯಿತು.
ಆರ್ಯವೈಶ್ಯ ಸಮಾಜದ ಪ್ರಮುಖರಾದ ವಿ.ಎನ್.ವಸಂತಕುಮಾರ್, ಉದಯಕುಮಾರ್, ಬಿ ಎಲ್ ಅಶೋಕ್ ಕುಮಾರ್ ಬಿ ಆರ್ ನಟರಾಜ್, ಕೆ.ಜೆ.ಸತೀಶ್, ವೈಶಾಕ್, ಪ್ರಶಾಂತ್, ಕೆ. ಪ್ರವೀಣ್, ಅಂಜನ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೂಡ ಅಧ್ಯಕ್ಷ ಪ್ರಮೋದ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯ ಬಿ.ಬಿ.ಭಾರತೀಶ್, ಹಿರಿಯ ಸಹಕಾರಿ ಎಂ.ಎನ್.ಕುಮಾರಪ್ಪ, ಪತ್ರಕರ್ತೆ ಸವಿತಾ ರೈ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಡಗು ನಿರ್ದೇಶಕಿ ಲೀಲಾವತಿ , ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ , ಧರಣಿ ಸೋಮಯ್ಯ, ಮತ್ತು ವಾಸವಿ ಸಪ್ತಾಹ ಸಮಿತಿ, ವಿವಿಧ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು ಇದ್ದರು.







