ಬೆಂಗಳೂರು,ಡಿ.28– ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ನೋಡಿಕೊಳ್ಳಲು ಸೂಕ್ತ ಬಂದೋಬಸ್ತ್ ಒದಗಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ವರ್ಷಾಚರಣೆಯ ಬಂದೋಬಸ್ತ್‌ಗಾಗಿ ಅಧಿಕಾರಿಗಳು ಸೇರಿದಂತೆ 20 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ನಿಯೋಜಿತ ಪೊಲೀಸ್ ಸಿಬ್ಬಂದಿಯಲ್ಲಿ ಸಂಚಾರಿ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ಇರುತ್ತಾರೆ. ಸಿಎಆರ್‌ನ 21 ತುಕಡಿ, ಕೆಎಸ್‌ಆರ್‌ಪಿಯ 88 ತುಕಡಿ ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗುತ್ತದ ಎಂದು ಅವರು ಹೇಳಿದರು.
ಕಳೆದ ವರ್ಷದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ 8ರಿಂದ 10 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು ಎಂಬ ಅಂದಾಜಿದೆ. ಈ ವರ್ಷ ಅದಕ್ಕಿಂತಲೂ ಅಂದರೆ 10 ಲಕ್ಷಕ್ಕೂ ಹೆಚ್ಚು ಜನ ಸೇರುವ ಅಂದಾಜು ಮಾಡಲಾಗಿದೆ.
ಮಹಾತಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾ ನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಗಳಲ್ಲಿ ಹೆಚ್ಚು ಜನಸಂದಣಿ ಇರುತ್ತದೆ. ಅಂತಹ ಕಡೆಗಳಲ್ಲಿ ದ್ರೋಣ್ ಕ್ಯಾಮೆರಾ ಬಳಸಿ ನಿಗಾ ಇಡಲಾಗುತ್ತದೆ ಹಾಗೂ ಹೆಚ್ಚು ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಅಳವಡಿಸಲಾಗಿರುವ ಸಿಸಿಟಿವಿಗಳ ಜೊತೆಗೆ 250 ಸಿಸಿಟಿವಿಗಳನ್ನು ಅಳವಡಿಸಲಾಗುತ್ತದೆ. ವಾಚ್ ಟವರ್, ಪೋಕಸ್ ಲೈಟ್‌ಗಳನ್ನು ಕೂಡ ಹಾಕಲಾಗಿದೆ. 246 ಹೊಯ್ಸಳ ವಾಹನಗಳು ಗಸ್ತಿನಲ್ಲಿರುತ್ತವೆ ಎಂದರು.
ಈ ಬಾರಿ ಹೊಸದಾಗಿ ಹೀಟ್‌ಮ್ಯಾಪ್ ಮಾಡಿಕೊಂಡಿದ್ದೇವೆ. ಎಲ್ಲೆಲ್ಲಿ ಜನದಟ್ಟಣೆ ಹೆಚ್ಚಾಗುತ್ತದೆಯೋ ಅದನ್ನು ಕಮಾಂಡ್ ಸೆಂಟರ್ ಮೂಲಕ ಗುರುತಿಸಿ ಅಂಥ ಕಡೆಗಳಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲು ಇದರಿಂದ ಅನುಕೂಲವಾಗಲಿದೆ ಎಂದರು.
ದೆಹಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ಈ ಬಾರಿಯ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚಿನ ನಿಗಾ ಇಡಲಾಗುವುದು. ಜೊತೆಗೆ ಕೇಂದ್ರ ಸರ್ಕಾರದ ಏಜೆನ್ಸಿಗಳೊಂದಿಗೂ ನಿಕಟ ಸಂಪರ್ಕ ಹೊಂದಲಾಗಿದೆ. ಒಟ್ಟಾರೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗುವುದು.
ಪೊಲೀಸರು ಸಹ ಹೊಸ ವರ್ಷವನ್ನು ಜವಾಬ್ದಾರಿಯುತವಾಗಿ ಆಚರಿಸಿ ಎಂಬ ಘೋಷವಾಕ್ಯವನ್ನು ನೀಡಿದ್ದಾರೆ. ಈಗಾಗಲೇ ಕ್ಲಬ್‌ಗಳು, ರೆಸ್ಟೊರೆಂಟ್‌ಗಳ ಮಾಲೀಕರು, ವ್ಯವಸ್ಥಾಪಕರ ಜೊತೆ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಲಾಗಿದೆ.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಪೊಲೀಸರ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಅವರು ತಿಳಿಸಿದರು. ಮಹಿಳಾ ಸುರಕ್ಷತೆಗೆ ಆದ್ಯತೆ: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಮಹಿಳಾ ಸುರಕ್ಷತೆಗೆ ಹೆಚ್ಚು ಆದ್ಯತೆ ಕೊಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಅವರು ಮನವಿ ಮಾಡಿದರು. ಮಕ್ಕಳು ಮನೆಯಿಂದ ಹೊರಗೆ ಹೋದ ಮೇಲೆ ಅವರು ಮನೆಗೆ ವಾಪಸ್ ಬರುವವರೆಗೂ ಪೋಷಕರು ಅವರನ್ನು ಗಮನಿಸಬೇಕು. ಹೆಚ್ಚು ನಿಗಾವಹಿಸಬೇಕು ಎಂದ ಅವರು, ಸಾರ್ವಜನಿಕರು ಕೂಡ ಪೊಲೀಸರೊಂದಿಗೆ ಸಹಕಾರ ನೀಡುವುದು ಅಗತ್ಯವಿದೆ ಎಂದು ಅವರು ಹೇಳಿದರು.







