ಬೆಂಗಳೂರು: ಮಂಗಳೂರು – ಬೆಂಗಳೂರು ರೈಲು ಮಾರ್ಗದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಮೀ ಮಾರ್ಗದ ವಿದ್ಯುದೀಕರಣ ಕಾಮಗಾರಿ ಮುಕ್ತಾಯವಾಗಿದೆ. ಭಾನುವಾರ ವಿದ್ಯುತ್ ಲೋಕೊಮೋಟಿವ್ ಪ್ರಯೋಗಾತ್ಮಕ ಚಾಲನೆ ಮಾಡಲಾಗಿದೆ. ಈ ಮೂಲಕ ಬೆಂಗಳೂರು – ಮಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸಲು ಅನುಕೂಲವಾಗಿದೆ.
ಈ ಬಗ್ಗೆ ನೈರುತ್ಯ ರೈಲ್ವೆ ಮೈಸೂರು ವಿಭಾಗ ಮಾಹಿತಿ ನೀಡಿದೆ. ” ಭಾನುವಾರ ವಿದ್ಯುತ್ ಲೋಕೊಮೋಟಿವ್ ಪ್ರಯೋಗಾತ್ಮಕ ಚಾಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಘಾಟ್ ವಿಭಾಗದ ಸಂಪೂರ್ಣ ವಿದ್ಯುದೀಕರಣವನ್ನು ಸಾಧಿಸಲಾಗಿದೆ ಎಂದು ತಿಳಿಸಿದೆ.

57 ಸುರಂಗಗಳು, 258 ಸೇತುವೆಗಳು
ಘಾಟ್ ವಿಭಾಗವು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿಮೀ ಉದ್ದದ ಮಾರ್ಗವನ್ನು ಒಳಗೊಂಡಿದ್ದು, ಇದು ಭಾರತೀಯ ರೈಲ್ವೆಯ ಅತ್ಯಂತ ತಾಂತ್ರಿಕ ಸವಾಲಿನ ವಿಭಾಗಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ 1ಕ್ಕೆ 50ರಷ್ಟು ಗ್ರೇಡಿಯಂಟ್, 57 ಸುರಂಗಗಳು, 258 ಸೇತುವೆಗಳು, 108 ತೀಕ್ಷ್ಣ ವಕ್ರಗಳು ಇರುವುದರ ಜೊತೆಗೆ, ಭೂಕುಸಿತಗಳಿಗೆ ಹೆಚ್ಚು ಒಳಪಡುವ ಪ್ರದೇಶವಾಗಿರುವುದರಿಂದ, ವಿದ್ಯುದೀಕರಣ ಕಾರ್ಯವು ಅತ್ಯಂತ ಸಂಕೀರ್ಣವಾಗಿತ್ತು ಎಂದು ರೈಲ್ವೆ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
120 ಕಿಮೀ ಪ್ರತಿ ಗಂಟೆ ವೇಗದಲ್ಲಿ ಸಂಚಾರಕ್ಕೆ ಅವಕಾಶ
ವಿದ್ಯುದೀಕರಣ ಕಾರ್ಯವು 2023 ಡಿಸೆಂಬರ್ 1 ರಂದು ಆರಂಭಗೊಂಡು, ₹93.55 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಈ ಯೋಜನೆಯಡಿ ಮಾರ್ಗದೊಳಗೆ ಐದು ಸ್ವಿಚಿಂಗ್ ಸ್ಟೇಷನ್‌ಗಳ ನಿರ್ಮಾಣ ಹಾಗೂ ಸಂಪೂರ್ಣ ವಿಭಾಗದಲ್ಲಿ ಮೇಲ್ಮೈ ವಿದ್ಯುದೀಕರಣ ಕಾರ್ಯ ಕೈಗೊಳ್ಳಲಾಗಿದೆ. ಮೇಲ್ಮೈ ವಿದ್ಯುತ್ ವ್ಯವಸ್ಥೆಯನ್ನು ಗರಿಷ್ಠ 120 ಕಿಮೀ ಪ್ರತಿ ಗಂಟೆ ವೇಗಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಎರಡು ವಿದ್ಯುತ್ ಕಂಬಗಳ ನಡುವಿನ ಗರಿಷ್ಠ ಅಂತರವನ್ನು 67.5 ಮೀಟರ್‌ಗೆ ಮಿತಿಗೊಳಿಸಲಾಗಿದೆ.







