ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ

ಮೈಸೂರು: “ನಾವು ಮಹಿಳಾ ಮೀಸಲಾತಿಯ ಪರವಾಗಿದ್ದೇವೆ, ಆದರೆ ಅದರ ಹೆಸರಿನಲ್ಲಿ ಕ್ಷೇತ್ರ ಮರುವಿಂಗಡನೆ ಮಾಡಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡುವುದನ್ನು ಸಹಿಸುವುದಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸೋಮವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡನೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಕಟುವಾಗಿ ಟೀಕಿಸಿದರು.

ಮೀಸಲಾತಿ ಜಾರಿಗೆ ವಿಳಂಬವೇಕೆ?

“2023ರಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದೆ. ಅಂದೇ ಅದನ್ನು ಜಾರಿ ಮಾಡಬಹುದಿತ್ತು. ಅದಕ್ಕಾಗಿ ಈಗಿನವರೆಗೆ ಕಾಯುವ ಅಗತ್ಯವಿರಲಿಲ್ಲ,” ಎಂದು ಪ್ರಶ್ನಿಸಿದ ಸಿಎಂ, 73 ಮತ್ತು 74ನೇ ಸಂವಿಧಾನ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂಬುದನ್ನು ನೆನಪಿಸಿದರು. “ಪ್ರಧಾನಿಗಳು 12 ವರ್ಷ ಅಧಿಕಾರದಲ್ಲಿದ್ದರೂ ಏಕೆ ಜಾರಿ ಮಾಡಲಿಲ್ಲ? ಈಗಲೂ 2023ರ ಮಸೂದೆಯಂತೆಯೇ ಜಾರಿ ಮಾಡಲಿ, ನಮ್ಮ ಅಭ್ಯಂತರವಿಲ್ಲ,” ಎಂದರು.

ದಕ್ಷಿಣ ಭಾರತಕ್ಕೆ ಶಿಕ್ಷೆ ನೀಡಬೇಡಿ

ಕ್ಷೇತ್ರ ಮರುವಿಂಗಡನೆಯ ಕುರಿತು ಮಾತನಾಡಿದ ಸಿದ್ದರಾಮಯ್ಯ, ಇದು ದಕ್ಷಿಣ ಭಾರತದ ರಾಜ್ಯಗಳಿಗೆ ಮಾಡುವ ದೊಡ್ಡ ಅನ್ಯಾಯ ಎಂದು ಬಣ್ಣಿಸಿದರು.

“ದಕ್ಷಿಣದ ರಾಜ್ಯಗಳು ಜನಸಂಖ್ಯೆಯನ್ನು ಸಮರ್ಥವಾಗಿ ನಿಯಂತ್ರಿಸಿವೆ. ಆದರೆ ಉತ್ತರ ಭಾರತದ ರಾಜ್ಯಗಳು ಇದನ್ನು ಮಾಡಿಲ್ಲ. ಈಗ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳನ್ನು ಮರು ವಿಂಗಡಿಸಿದರೆ, ಜನಸಂಖ್ಯೆ ಹೆಚ್ಚಿರುವ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳು ಸಿಗುತ್ತವೆ. ಉತ್ತಮವಾಗಿ ಕೆಲಸ ಮಾಡಿದ ನಮಗೆ ಸ್ಥಾನಗಳು ಕಡಿಮೆಯಾಗುತ್ತವೆ. ಇದು ಪ್ರಗತಿಪರ ರಾಜ್ಯಗಳಿಗೆ ನೀಡುವ ಶಿಕ್ಷೆಯೇ?” ಎಂದು ಅವರು ಕಿಡಿಕಾರಿದರು.

ಪ್ರಧಾನಿಗಳೊಂದಿಗೆ ‘ಗೌಪ್ಯ’ ಮಾತುಕತೆ ಬಹಿರಂಗ

ಇತ್ತೀಚೆಗೆ ಬೆಂಗಳೂರಿಗೆ ಪ್ರಧಾನಿ ಮೋದಿ ಬಂದಿದ್ದಾಗ ನಡೆದ ಸಂಭಾಷಣೆಯನ್ನು ಉಲ್ಲೇಖಿಸಿದ ಸಿಎಂ, “ಪ್ರಧಾನಿಗಳು ನನ್ನ ಬಳಿ ಮಹಿಳಾ ಮೀಸಲಾತಿ ಬಗ್ಗೆ ನಿಲುವೇನು ಎಂದು ಕೇಳಿದ್ದರು. ನಾನು ಸ್ಪಷ್ಟವಾಗಿ ಮೀಸಲಾತಿಯ ಪರವಾಗಿದ್ದೇನೆ ಎಂದು ತಿಳಿಸಿದ್ದೇನೆ. ಆದರೆ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡನೆಯೊಂದಿಗೆ ಬೆರೆಸಿ ರಾಜಕೀಯ ಲಾಭ ಪಡೆಯುವುದು ಸರಿಯಲ್ಲ,” ಎಂದರು.

ರಾಜಕೀಯ ಲಾಭದ ಲೆಕ್ಕಾಚಾರ

“ಮೂರನೇ ಎರಡರಷ್ಟು ಬಹುಮತವಿಲ್ಲ ಎಂದು ತಿಳಿದಿದ್ದರೂ ಈ ಎರಡು ಮಸೂದೆಗಳನ್ನು ಒಟ್ಟಿಗೆ ತಂದಿರುವುದು ರಾಜಕೀಯ ಪ್ರಹಸನ. ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ, ಅವರದ್ದು ಕೇವಲ ರಾಜಕೀಯ ಭಾಷಣ,” ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು. ಹೊಸ ಜನಗಣತಿಯ ನಂತರವೇ ವೈಜ್ಞಾನಿಕವಾಗಿ ಕ್ಷೇತ್ರ ಮರುವಿಂಗಡನೆ ಆಗಬೇಕು ಮತ್ತು ಎಲ್ಲ ರಾಜ್ಯಗಳಿಗೂ ಸಮಾನ ಪ್ರಾತಿನಿಧ್ಯ ಸಿಗಬೇಕು ಎಂಬುದು ತಮ್ಮ ನಿಲುವು ಎಂದು ಅವರು ಪುನರುಚ್ಚರಿಸಿದರು.

  • Related Posts

    ಮುಳ್ಳೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ: ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗಿ

    ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮಹೋತ್ಸವವನ್ನು ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ಆಚರಿಸಲಾಯಿತು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ…

    Continue reading
    ಶಾಸಕ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್

    ಬೆಂಗಳೂರು: ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಹೊಸೂರು ಮುಖ್ಯರಸ್ತೆಯ ಕೊನಪ್ಪನ ಅಗ್ರಹಾರದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಹಿರಿಯೂರು ಶಾಸಕ ಶ್ರೀ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯನ್ನು…

    Continue reading

    Leave a Reply

    Your email address will not be published. Required fields are marked *