ಬೀದರ್: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಲೆದೂರಿರುವ ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರು, ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ತುರ್ತು ಸಭೆ ನಡೆಸಿದರು.
ಔರಾದ್(ಬಿ), ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ, ಬೀದರ್, ಚಿಟಗುಪ್ಪ, ಕಮಲನಗರ್ ಹಾಗೂ ಹುಲಸೂರು ತಾಲೂಕುಗಳಲ್ಲಿನ ನೀರಿನ ಲಭ್ಯತೆ ಮತ್ತು ಪೂರೈಕೆಯ ಕುರಿತು ಸಚಿವರು ವಿವರವಾದ ಮಾಹಿತಿ ಪಡೆದರು.
ಸಾಮಾಜಿಕ ಜಾಲತಾಣದ ದೃಶ್ಯಗಳಿಗೆ ಸಚಿವರ ಸ್ಪಂದನೆ
ಕೆಲವು ಗ್ರಾಮಗಳಲ್ಲಿ ಮಹಿಳೆಯರು ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ನಡೆದು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಸಚಿವರು, ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಪರಿಸ್ಥಿತಿ ಜಿಲ್ಲೆಯ ಯಾವುದೇ ಭಾಗದಲ್ಲಿ ಮರುಕಳಿಸದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಅಧಿಕಾರಿಗಳಿಗೆ ನೀಡಿದ ಪ್ರಮುಖ ನಿರ್ದೇಶನಗಳು:
ಟ್ಯಾಂಕರ್ ಪೂರೈಕೆ: ನೀರಿನ ತೀವ್ರ ಅಭಾವವಿರುವ ಪ್ರದೇಶಗಳಿಗೆ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು.
ದುರಸ್ತಿ ಕಾರ್ಯ: ಕೆಟ್ಟುಹೋಗಿರುವ ಬೋರ್‌ವೆಲ್‌ಗಳನ್ನು ಯುದ್ಧೋಪಾದಿಯಲ್ಲಿ ದುರಸ್ತಿಗೊಳಿಸಬೇಕು ಮತ್ತು ಹೊಸ ನೀರಿನ ಮೂಲಗಳನ್ನು ಶೀಘ್ರವಾಗಿ ಪತ್ತೆಹಚ್ಚಬೇಕು.
ನಿರಂತರ ಪೂರೈಕೆ: ಸಾರ್ವಜನಿಕರಿಗೆ 24×7 ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸೂಚಿಸಿದರು.
ಸಿಎಂ ಭೇಟಿ: ಪೂರ್ವಸಿದ್ಧತೆ ಪರಿಶೀಲನೆ
ಇದೇ ಏಪ್ರಿಲ್ 11ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಬೀದರ್ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಕಾರ್ಯಕ್ರಮವು ಅತ್ಯಂತ ಸುಸೂತ್ರವಾಗಿ ಮತ್ತು ಯಶಸ್ವಿಯಾಗಿ ನಡೆಯುವಂತೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಶಿಷ್ಟಾಚಾರದಂತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.







