ಬೆಂಗಳೂರು: ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರಿಗೆ ಇಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವತಿಯಿಂದ ‘ವಿದ್ಯಾವಾರಾಧಿ’ (PhD) ಪದವಿ ನೀಡಿ ಗೌರವಿಸಲಾಯಿತು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ 12 ಮತ್ತು 13ನೇ ಘಟಿಕೋತ್ಸವ ಸಮಾರಂಭದಲ್ಲಿ, ಘನತೆವೆತ್ತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಥಾವರ್ ಚಂದ್ ಗೆಹ್ಲೋಟ್ ಅವರು ಶ್ರೀಗಳಿಗೆ ಪದವಿ ಪ್ರಮಾಣಪತ್ರವನ್ನು ಪ್ರದಾನ ಮಾಡಿದರು.
ಸಂಶೋಧನಾ ವಿಷಯ: ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳೂ ಆಗಿರುವ ಪೂಜ್ಯ ಶ್ರೀಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಕುಂದೂರು ಮಠದ ಮಠಾಧೀಪತಿಗಳಾದ ಡಾ. ಶ್ರೀ ಶರತ್ ಚಂದ್ರ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ವೇದಾಂತ ವಿಭಾಗದಲ್ಲಿ “ಅಂಶುಮದಾಗಮಮ್ ಸಂಪಾದನಾತ್ಮಕ ಅಧ್ಯಯನಮ್” ಎಂಬ ವಿಷಯದ ಕುರಿತು ಹಸ್ತಪ್ರತಿಗಳನ್ನು ಆಧರಿಸಿ ಸಿದ್ಧಪಡಿಸಿದ ಸಂಶೋಧನಾ ಪ್ರಬಂಧಕ್ಕೆ ಈ ಉನ್ನತ ಪದವಿ ಲಭಿಸಿದೆ.
ಅಭಿನಂದನೆಗಳ ಮಹಾಪೂರ: ಆಧ್ಯಾತ್ಮಿಕ ಸೇವೆಯ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಮೈಲಿಗಲ್ಲು ಸ್ಥಾಪಿಸಿರುವ ಪೂಜ್ಯ ಶ್ರೀಗಳಿಗೆ ಭಕ್ತವೃಂದ ಹಾಗೂ ಗಣ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಗೆ ಈ ಗೌರವವು ಹೊಸ ಮೆರುಗು ನೀಡಿದೆ.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು, ಪ್ರಾಧ್ಯಾಪಕರು ಹಾಗೂ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.







