ರಾಯಚೂರು: 2027ರ ಜನಗಣತಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ದೊರೆತಿದ್ದು, ಈ ಹಿನ್ನೆಲೆಯಲ್ಲಿ ರಾಯಚೂರು ಮಹಾನಗರ ಪಾಲಿಕೆಯ ವತಿಯಿಂದ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇಂದು ಗಣತಿದಾರರು ಮತ್ತು ಮೇಲ್ವಿಚಾರಕರಿಗಾಗಿ ಮೊದಲ ಹಂತದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಜನಗಣತಿಯನ್ನು ನಿಖರವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ನೂರಾರು ಗಣತಿದಾರರು ಇದರಲ್ಲಿ ಭಾಗವಹಿಸಿದ್ದರು.
ಗಣತಿಯ ವೇಳಾಪಟ್ಟಿ: ಏಪ್ರಿಲ್ 1 ರಿಂದಲೇ ‘ಸ್ವಯಂ ಗಣತಿ’ (Self-Enumeration) ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 16 ರಿಂದ ಮೇ 15 ರವರೆಗೆ ಮನೆ ಮನೆಗೆ ಭೇಟಿ ನೀಡಿ ನಡೆಸುವ ಜನಸಂಖ್ಯಾ ಎಣಿಕೆ ಕಾರ್ಯ ನಡೆಯಲಿದೆ.
ಆಯುಕ್ತರ ಕಟ್ಟುನಿಟ್ಟಿನ ಸೂಚನೆ: ಸಭೆಯನ್ನುದ್ದೇಶಿಸಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಜುಬಿನ್ ಮೋಹಪಾತ್ರ ಅವರು, “ಜನಗಣತಿಯು ರಾಷ್ಟ್ರದ ಪ್ರಮುಖ ಪ್ರಕ್ರಿಯೆಯಾಗಿದ್ದು, ನಿಯೋಜನೆಗೊಂಡಿರುವ ಪ್ರತಿಯೊಬ್ಬ ಗಣತಿದಾರರು ಮತ್ತು ಮೇಲ್ವಿಚಾರಕರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಜಾಗರೂಕತೆಯಿಂದ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಿ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕು” ಎಂದು ತಿಳಿಸಿದರು.
ತಾಂತ್ರಿಕ ತರಬೇತಿ: ಗಣತಿ ಸಂದರ್ಭದಲ್ಲಿ ಮಾಹಿತಿ ಸಂಗ್ರಹಣೆ ಮಾಡುವುದು ಹೇಗೆ, ತಾಂತ್ರಿಕ ಅಪ್ಲಿಕೇಶನ್‌ಗಳ ಬಳಕೆ ಮತ್ತು ಸಾರ್ವಜನಿಕರೊಂದಿಗೆ ವ್ಯವಹರಿಸುವ ಕುರಿತು ತಜ್ಞರಿಂದ ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಕಂದಾಯ ವಿಭಾಗದ ಆಯುಕ್ತರಾದ ಶ್ರೀ ಶರಣಪ್ಪ ಬಿ, ವಲಯ ಆಯುಕ್ತರಾದ ಶ್ರೀ ಮಲ್ಲಿಕಾರ್ಜುನ ಬಿ.ಎಂ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣ ಶಾವಂತಗೇರಿ ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಗಣತಿಗೆ ನಿಯೋಜನೆಗೊಂಡ ಸಿಬ್ಬಂದಿಗಳು ಉಪಸ್ಥಿತರಿದ್ದರು.







