ಬೆಂಗಳೂರು: ಕರ್ನಾಟಕದ ಸಹಕಾರಿ ರಂಗದ ಪಿತಾಮಹ, ‘ಸಹಕಾರ ಚತುರ’ ಎಂದೇ ಖ್ಯಾತರಾದ ದಿವಂಗತ ಕೆ.ಹೆಚ್. ಪಾಟೀಲ್ ಅವರ 101ನೇ ಜಯಂತ್ಯೋತ್ಸವ ಸಮಾರಂಭವು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅತ್ಯಂತ ಸಡಗರದಿಂದ ಜರುಗಿತು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಕಾರಿ ಬಂಧುಗಳು ಮತ್ತು ಗಣ್ಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಕೆ.ಹೆಚ್. ಪಾಟೀಲರು ಹಾಕಿಕೊಟ್ಟ ಸಹಕಾರಿ ತತ್ವಗಳು ಮತ್ತು ಅವರು ಕಟ್ಟಿದ ಸಂಸ್ಥೆಗಳ ಮಹತ್ವವನ್ನು ಸ್ಮರಿಸಲಾಯಿತು.
ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಕೇಂದ್ರದ ಮಾಜಿ ಸಚಿವರು ಹಾಗೂ ಹಾಲಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಉಪಸ್ಥಿತರಿದ್ದು, ದಿ. ಕೆ.ಹೆಚ್. ಪಾಟೀಲರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.
ಮಾಜಿ ಮುಖ್ಯಮಂತ್ರಿಗಳು: ಶ್ರೀ ವೀರಪ್ಪ ಮೊಯ್ಲಿ, ಸಭಾಧ್ಯಕ್ಷರು: ಶ್ರೀ ಯು.ಟಿ. ಖಾದರ್ (ವಿಧಾನಸಭೆ), ಸಭಾಪತಿಗಳು: ಶ್ರೀ ಬಸವರಾಜ ಹೊರಟ್ಟಿ (ವಿಧಾನ ಪರಿಷತ್), ಉಪ ಸಭಾಪತಿಗಳು: ಶ್ರೀ ರುದ್ರಪ್ಪ ಲಮಾಣಿ, ಸಚಿವರು: ಶ್ರೀ ಹೆಚ್.ಕೆ. ಪಾಟೀಲ್, ಶ್ರೀ ಬೋಸರಾಜು, ಶ್ರೀ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವು ಸಚಿವರು ಮತ್ತು ಶಾಸಕರು ಭಾಗವಹಿಸಿದ್ದರು.
ಸಹಕಾರಿ ರಂಗಕ್ಕೆ ಆದರ್ಶ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ಕೆ.ಹೆಚ್. ಪಾಟೀಲರು ಕೇವಲ ಒಬ್ಬ ರಾಜಕಾರಣಿಯಲ್ಲ, ಅವರು ಸಹಕಾರಿ ರಂಗದಲ್ಲಿ ಕ್ರಾಂತಿ ಮಾಡಿದ ಮಹಾನ್ ಚೇತನ. ರೈತರಿಗೆ ಆರ್ಥಿಕ ಶಕ್ತಿ ನೀಡುವಲ್ಲಿ ಅವರು ವಹಿಸಿದ ಪಾತ್ರ ಅವಿಸ್ಮರಣೀಯ,” ಎಂದರು.
ಸಚಿವ ಕೆ.ಹೆಚ್. ಮುನಿಯಪ್ಪನವರು ಮಾತನಾಡಿ, ಪಾಟೀಲರ ದೂರದೃಷ್ಟಿ ಮತ್ತು ಜನರ ಮೇಲಿದ್ದ ಅವರ ಕಾಳಜಿಯು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಕೆ.ಹೆಚ್. ಪಾಟೀಲರ ಪುತ್ರರಾದ ಸಚಿವ ಹೆಚ್.ಕೆ. ಪಾಟೀಲರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಗಣ್ಯರಿಗೆ ವಂದನೆಗಳನ್ನು ಅರ್ಪಿಸಿದರು.







