ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವದ ಸಂಭ್ರಮ ಕಳೆಗಟ್ಟುತ್ತಿದೆ. ಈ ಸಲದ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ಮಾರ್ಚ್ 29 ರಂದು ನಗರದಲ್ಲಿ ಪ್ರಪ್ರಥಮ ಬಾರಿಗೆ ‘ಗರಳಪುರಿ ಉತ್ಸವ – 2026’ ಆಯೋಜಿಸಲಾಗಿದೆ. ಈ ಉತ್ಸವದ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿರುವ ಯೋಗ ಜಾಗೃತಿ ಕಾರ್ಯಕ್ರಮದ ಪೋಸ್ಟರ್ ಅನ್ನು ಇಂದು ನಂಜನಗೂಡಿನ ಯೋಗ ಮಹಾಮನೆ ಶಾಖೆಯಲ್ಲಿ ಬಿಡುಗಡೆ ಮಾಡಲಾಯಿತು.
ಮಾರ್ಚ್ 22 ರಂದು ಯೋಗ ಜಾಗೃತಿ
ಜಾತ್ರಾ ಮಹೋತ್ಸವ ಹಾಗೂ ಗರಳಪುರಿ ಉತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ಯೋಗದ ಬಗ್ಗೆ ಅರಿವು ಮೂಡಿಸಲು ದಿನಾಂಕ 22-03-2026, ಭಾನುವಾರ ಯೋಗ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸಾಂಸ್ಕೃತಿಕ ವೈಭವದ ಜೊತೆಗೆ ಸದೃಢ ಸಮಾಜದ ಸಂದೇಶ ಸಾರುವುದು ಸಂಘಟಕರ ಉದ್ದೇಶವಾಗಿದೆ.
ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಪ್ರಮುಖ ನಾಯಕರಾದ ದರ್ಶನ್ ಧ್ರುವನಾರಾಯಣ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಇವರೊಂದಿಗೆ: ನಗರ ಬ್ಲಾಕ್ ಅಧ್ಯಕ್ಷರಾದ ಸಿ. ಎಂ. ಶಂಕರ್, ಪ್ರಮುಖರಾದ ಮಹೇಶ್, ಗಾಯತ್ರಿ ಮೋಹನ್, ಗಣೇಶ್, ಶ್ರೀಧರ್, ರವಿ, ಗುರುಮಾಲ್ಲಪ್ಪ, ನಾಗರಾಜ್, ಯೋಗ ಶಿಕ್ಷಕರಾದ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಹಾಗೂ ಯೋಗಾಸಕ್ತರು ಉಪಸ್ಥಿತರಿದ್ದರು.







