ನವದೆಹಲಿ/ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರವಾದ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ₹184 ಕೋಟಿ ಮೊತ್ತದ ಬೃಹತ್ ಯೋಜನೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ.
ಚಿಕ್ಕಬಳ್ಳಾಪುರ ಸಂಸದರಾದ ಡಾ. ಕೆ. ಸುಧಾಕರ್ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರದ ‘ಪ್ರಸಾದ್ 2.0’ (PRASHAD 2.0) ಯೋಜನೆಯಡಿ ಕ್ಷೇತ್ರದ ಅಭಿವೃದ್ಧಿ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಅನುಮೋದನೆಯ ಭರವಸೆ: ಕಳೆದ ಡಿಸೆಂಬರ್‌ನಲ್ಲಿ ಸಲ್ಲಿಸಲಾಗಿದ್ದ ₹184 ಕೋಟಿ ಮೊತ್ತದ ಈ ಪ್ರಸ್ತಾವನೆಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ಒಂದು ತಿಂಗಳೊಳಗೆ ಅಧಿಕೃತವಾಗಿ ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮಾದರಿ ಯಾತ್ರಾಸ್ಥಳ: ಈ ಯೋಜನೆಯಡಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಸುಸಜ್ಜಿತ ಮೂಲಸೌಕರ್ಯ, ಆಧುನಿಕ ಶೌಚಾಲಯ ವ್ಯವಸ್ಥೆ, ನೈರ್ಮಲ್ಯ ಹಾಗೂ ವಸತಿ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಾದರಿ ಯಾತ್ರಾಸ್ಥಳವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ.
ಕೇಂದ್ರಕ್ಕೆ ಧನ್ಯವಾದ: ಈ ಮಹತ್ವಾಕಾಂಕ್ಷೆಯ ಯೋಜನೆಗೆ ಬೆಂಬಲ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಡಾ. ಕೆ. ಸುಧಾಕರ್ ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.
“ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯು ಈ ಪುಣ್ಯಕ್ಷೇತ್ರದ ಮುಖಪುಟವನ್ನೇ ಬದಲಿಸಲಿದೆ,” ಎಂದು ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.







