ಮಂಡ್ಯ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರ ಋತುಚಕ್ರದ ನೈರ್ಮಲ್ಯ ಹಾಗೂ ಆರೋಗ್ಯ ಕಾಪಾಡುವ ಉದ್ದೇಶದಿಂದ ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಒಂದು ತಿಂಗಳ ಕಾಲ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು ತಿಳಿಸಿದರು.
ಗುರುವಾರ ಜಿಲ್ಲಾ ಪಂಚಾಯತ್‌ನ KSWAN ಕೇಂದ್ರದಲ್ಲಿ ನಡೆದ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ವಿಡಿಯೋ ಸಂವಾದದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆಯರ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ:
ವಯೋಮಾನದ ಆಧಾರಿತ ಜಾಗೃತಿ: * 18 ರಿಂದ 35 ವರ್ಷ: ಈ ವಯಸ್ಸಿನ ಮಹಿಳೆಯರ ಗುಂಪು ರಚಿಸಿ ವೈಯಕ್ತಿಕ ಸ್ವಚ್ಛತೆ ಹಾಗೂ ಋತುಚಕ್ರ ನೈರ್ಮಲ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವುದು.
35 ರಿಂದ 45 ವರ್ಷ: ಈ ವಯಸ್ಸಿನ ಮಹಿಳೆಯರಿಗೆ ‘ಮುಟ್ಟಿನ ಕಪ್’ (Menstrual Cup) ವಿತರಿಸಿ, ಅದರ ಬಳಕೆಯ ಬಗ್ಗೆ ತಜ್ಞ ವೈದ್ಯರಿಂದ ಮಾಹಿತಿ ನೀಡುವುದು.
ಪ್ಯಾಡ್ ಮುಕ್ತ ಗ್ರಾಮ ಪಂಚಾಯಿತಿ: ಜಿಲ್ಲೆಯ 17 ಗ್ರಾಮ ಪಂಚಾಯಿತಿಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದ್ದು, ಇಲ್ಲಿನ ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿಯರು ಹಾಗೂ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಿಸಿ ‘ಪ್ಯಾಡ್ ಮುಕ್ತ ಪಂಚಾಯಿತಿ’ಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ.
ವ್ಯಾಪಕ ಜಾಗೃತಿ: NRLM ಯೋಜನೆಯಡಿ ಆಹಾರ, ಪೌಷ್ಟಿಕತೆ, ಆರೋಗ್ಯ ಮತ್ತು ನೈರ್ಮಲ್ಯ (FNHW) ಹಾಗೂ ಲಿಂಗತ್ವ ದೌರ್ಜನ್ಯ ತಡೆಯುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.
ಅಭಿಯಾನವನ್ನು ಯಶಸ್ವಿಗೊಳಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎನ್.ಆರ್.ಎಲ್.ಎಂ (NRLM) ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಲು ಸೂಚನೆ ನೀಡಲಾಗಿದೆ.
“ಮಹಿಳೆಯರು ಸಾಂಪ್ರದಾಯಿಕ ಪದ್ಧತಿಗಳಿಂದ ಆಧುನಿಕ ಹಾಗೂ ಸುರಕ್ಷಿತ ನೈರ್ಮಲ್ಯ ಪದ್ಧತಿಗಳಿಗೆ ಬದಲಾಗುವುದು ಇಂದಿನ ಅಗತ್ಯವಾಗಿದೆ. ಈ ಅಭಿಯಾನವು ಜಿಲ್ಲೆಯ ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ,” ಎಂದು ಸಿಇಒ ನಂದಿನಿ ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸುಂದರ್ ರಾಜ್, ಸಹಾಯಕ ಯೋಜನಾಧಿಕಾರಿ ಹರ್ಷ, ಡಾ. ಶಿಲ್ಪಾ, ಡಾ. ಬೆಟ್ಟಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







