ಬೆಂಗಳೂರು: ನಗರದ ಸಂಚಾರ ದಟ್ಟಣೆ ನಿವಾರಣೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಯ ಆಮೆಗತಿಯ ನಡಿಗೆಗೆ ಜಿಬಿಎ ಮುಖ್ಯ ಆಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಬೆಳಿಗ್ಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿದರು.
ಪರಿಶೀಲನೆಯ ಮುಖ್ಯಾಂಶಗಳು:
ಈಜೀಪುರ ಮೇಲ್ಸೇತುವೆ: ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಿದ ಆಯುಕ್ತರು, ಹೆಚ್ಚಿನ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸಿದರು. “ಎಲ್ಲಾ ಹಂತದ ಕೆಲಸಗಳನ್ನು ಏಕಕಾಲದಲ್ಲಿ (Simultaneous work) ನಡೆಸಿ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು” ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ವೈಟ್ ಟಾಪಿಂಗ್ ಕಾಮಗಾರಿಗಳು: ನಗರದ ಈ ಕೆಳಗಿನ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಪ್ರಗತಿಯನ್ನು ಪರಿಶೀಲಿಸಲಾಯಿತು:
ಸರ್ಜಾಪುರ ರಸ್ತೆ
ಕೋರಮಂಗಲ 80 ಅಡಿ ರಸ್ತೆ
ಪಾಮ್ ಗ್ರೋವ್ ರಸ್ತೆ
ಸುಲ್ತಾನ್ ಪೇಟೆ ರಸ್ತೆ
ಶಿರಸಿ ರಸ್ತೆ
ತ್ವರಿತಗತಿಗೆ ಸೂಚನೆ: ವೈಟ್ ಟಾಪಿಂಗ್ ಕೆಲಸಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸಲು, ಬಾಕಿ ಇರುವ ಸಣ್ಣಪುಟ್ಟ ಕೆಲಸಗಳನ್ನು ಕೂಡಲೇ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿದರು.
ಪರಿಶೀಲನಾ ಸಂದರ್ಭದಲ್ಲಿ ನಗರ ಪಾಲಿಕೆ ಆಯುಕ್ತರಾದ ರಮೇಶ್ ಕೆ.ಎನ್, ಮುಖ್ಯ ಅಭಿಯಂತರರಾದ ರವಿ, ಡಾ. ರಾಘವೇಂದ್ರ ಪ್ರಸಾದ್, ಹಾಗೂ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದು, ಕಾಮಗಾರಿಯ ಸದ್ಯದ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದರು.







