ಬೆಂಗಳೂರು: ರಾಜ್ಯದ ಫಾರ್ಮಸಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂದು ವಿಕಾಸಸೌಧದಲ್ಲಿ ಪ್ರಮುಖ ಸಭೆ ಜರುಗಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಕರ್ನಾಟಕ ಪ್ರೈವೇಟ್ ಫಾರ್ಮಸಿ ಕಾಲೇಜು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಜೊತೆ ಫೀಸ್ ಸ್ಟ್ರಕ್ಚರ್ (ಶುಲ್ಕ ವಿನ್ಯಾಸ) ಕುರಿತು ಪೂರ್ವಭಾವಿ ಸಭೆ ನಡೆಸಿದರು.
ದೇಶದಲ್ಲೇ ಮೊದಲು: ಅಪ್ರೆಂಟಿಶಿಪ್ ಪ್ರೋತ್ಸಾಹಧನ
ಹೊಸದಾಗಿ ಡಿ.ಫಾರ್ಮಾ (D.Pharma) ಕೋರ್ಸ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರವು ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದಿದೆ. ಇಡೀ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ 11 ತಿಂಗಳ ಅವಧಿಗೆ ಪ್ರತಿ ತಿಂಗಳು 8,000 ರೂ. ಗಳಂತೆ ಅಪ್ರೆಂಟಿಶಿಪ್ ಪ್ರೋತ್ಸಾಹಧನ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.
ವೃತ್ತಿಪರ ಜೀವನಕ್ಕೆ ಬಲ
ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸಿಗುವುದಲ್ಲದೆ, ಅವರ ವೃತ್ತಿಪರ ಜೀವನಕ್ಕೆ ಭದ್ರ ಬುನಾದಿ ಸಿಗಲಿದೆ. ಈ ಕುರಿತು ಸಭೆಯಲ್ಲಿ ಭಾಗವಹಿಸಿದ್ದ ಫಾರ್ಮಾ ಕಾಲೇಜಿನ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, “ಈ ಅಪ್ರೆಂಟಿಶಿಪ್ ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಉದ್ಯೋಗದ ಬಾಗಿಲುಗಳು ಸುಲಭವಾಗಿ ತೆರೆಯುತ್ತವೆ” ಎಂದು ಅಭಿಪ್ರಾಯಪಟ್ಟರು.







