ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಕಂಪ್ಯೂಟರ್ ಪರಿಕರ ವಿತರಣೆ: ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ ಸಮಾಜಮುಖಿ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಶ್ಲಾಘನೆ

ಚಾಮರಾಜನಗರ: ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರಿ ಸೌಲಭ್ಯಗಳ ಜೊತೆಗೆ ಸಂಘ-ಸಂಸ್ಥೆಗಳ ಸಹಕಾರವೂ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಅಭಿಪ್ರಾಯಪಟ್ಟರು.

ನಗರದ ಎ.ಪಿ.ಎಂ.ಸಿ ಪ್ರವೇಶದ್ವಾರದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ರೋಟರಿ ಸಿಲ್ಕ್‍ಸಿಟಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಕಂಪ್ಯೂಟರ್ ಸಿಸ್ಟಮ್ಸ್, ಟೇಬಲ್ ಹಾಗೂ ಚೇರ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

ಜಿಲ್ಲೆಯ ಅಭಿವೃದ್ಧಿಗೆ ಸಂಘ-ಸಂಸ್ಥೆಗಳ ಸಾಥ್

“ಗಡಿಜಿಲ್ಲೆ ಚಾಮರಾಜನಗರ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಜಿಲ್ಲಾಡಳಿತದೊಂದಿಗೆ ರೋಟರಿ ಸಿಲ್ಕ್ ಸಿಟಿ ಸಂಸ್ಥೆಯು ಕೈಜೋಡಿಸಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಈ ಆಧುನಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು,” ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.

ಮೂಲಸೌಕರ್ಯಕ್ಕೆ ಆದ್ಯತೆ: ಸಿಇಒ ಮೋನಾ ರೋತ್

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಮಾತನಾಡಿ, “ಉಪ ಲೋಕಾಯುಕ್ತರ ಸೂಚನೆಯಂತೆ ವಿದ್ಯಾರ್ಥಿನಿಲಯದಲ್ಲಿ ಸ್ವಚ್ಛತೆ ಹಾಗೂ ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿದ್ಯಾರ್ಥಿನಿಯರು ಯಾವುದೇ ಕುಂದುಕೊರತೆಗಳಿದ್ದಲ್ಲಿ ನೇರವಾಗಿ ಜಿಲ್ಲಾಡಳಿತದ ಗಮನಕ್ಕೆ ತರಬಹುದು,” ಎಂದು ಭರವಸೆ ನೀಡಿದರು.

ಆಹಾರ ಮೇಳದ ಹಣ ಸಮಾಜ ಸೇವೆಗೆ ವಿನಿಯೋಗ

ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಸಮಿತ್ ಕುಮಾರ್ ಹಾಗೂ ಪದಾಧಿಕಾರಿಗಳಾದ ಡಿ.ಎಸ್. ಗಿರೀಶ್ ಮತ್ತು ಬಿ.ಪಿ. ವಿಶ್ವಾಸ್ ಮಾತನಾಡಿ, “ನಗರದಲ್ಲಿ ಆಯೋಜಿಸಲಾಗುವ ಆಹಾರ ಮೇಳದಿಂದ ಸಂಗ್ರಹವಾಗುವ ನಿಧಿಯನ್ನು ಸಮಾಜ ಸೇವೆಗೆ ಬಳಸಲಾಗುತ್ತಿದೆ. ಈಗಾಗಲೇ ಮೂಕನಪಾಳ್ಯ ಶಾಲಾ ಕಟ್ಟಡ ಅಭಿವೃದ್ಧಿಪಡಿಸಲಾಗಿದ್ದು, ಈ ಬಾರಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಪೂರಕವಾಗಿ ಕಂಪ್ಯೂಟರ್ ಪರಿಕರಗಳನ್ನು ನೀಡಲಾಗಿದೆ,” ಎಂದು ತಿಳಿಸಿದರು.

ವಿದ್ಯಾರ್ಥಿನಿಯರೊಂದಿಗೆ ಸಂವಾದ

ಪರಿಕರಗಳ ವಿತರಣೆಯ ನಂತರ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಜಿ.ಪಂ ಸಿಇಒ ಮೋನಾ ರೋತ್ ಅವರು ವಿದ್ಯಾರ್ಥಿನಿಲಯದ ಕೊಠಡಿಗಳು ಮತ್ತು ಸ್ವಚ್ಛತೆಯನ್ನು ಪರಿಶೀಲಿಸಿದರು. ಬಳಿಕ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಅವರ ಆರೋಗ್ಯ, ಶಿಕ್ಷಣ ಮತ್ತು ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಶ್ವನಾಥ್, ತಾಲೂಕು ಅಧಿಕಾರಿ ಲಿಂಗರಾಜು, ಸಿ.ಎಸ್.ಆರ್ ನಿಧಿ ಸಂಯೋಜಕಿ ರಕ್ಷಿತಾ, ನಿಲಯಪಾಲಕಿ ಸುನೀತ ಹಾಗೂ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • Related Posts

    ಮುಳ್ಳೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ: ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗಿ

    ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮಹೋತ್ಸವವನ್ನು ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ಆಚರಿಸಲಾಯಿತು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ…

    Continue reading
    ಶಾಸಕ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್

    ಬೆಂಗಳೂರು: ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಹೊಸೂರು ಮುಖ್ಯರಸ್ತೆಯ ಕೊನಪ್ಪನ ಅಗ್ರಹಾರದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಹಿರಿಯೂರು ಶಾಸಕ ಶ್ರೀ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯನ್ನು…

    Continue reading

    Leave a Reply

    Your email address will not be published. Required fields are marked *