ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ, ದಿವಂಗತ ಡಾ. ಭೀಮಣ್ಣ ಖಂಡ್ರೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಪಾಲ್ಗೊಂಡು ಪುಷ್ಪನಮನ ಸಲ್ಲಿಸಿದರು.
ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಜಿ ಸಚಿವರಾಗಿದ್ದ ಲಿಂಗೈಕ್ಯ ಭೀಮಣ್ಣ ಖಂಡ್ರೆ ಅವರ ನಾಡು ಮತ್ತು ಸಮಾಜಮುಖಿ ಸೇವೆಯನ್ನು ಸ್ಮರಿಸಿದ ಸಚಿವರು, ಅವರೊಂದಿಗಿನ ವೈಯಕ್ತಿಕ ಮತ್ತು ರಾಜಕೀಯ ಒಡನಾಟವನ್ನು ಮೆಲುಕು ಹಾಕಿದರು.
ರೈತಪರ ಕಾಳಜಿಯ ಸ್ಮರಣೆ:
ಸಚಿವ ಎಂ.ಬಿ. ಪಾಟೀಲ್ ಅವರು ಮಾತನಾಡಿ, “ಶತಾಯುಷಿ ಶರಣ ಭೀಮಣ್ಣ ಖಂಡ್ರೆ ಅವರು ಸಚಿವರಾಗಿದ್ದ ಅವಧಿಯಲ್ಲಿ ರೈತರ ಸಂಕಷ್ಟಗಳಿಗೆ ಸದಾ ಮಿಡಿಯುತ್ತಿದ್ದರು. ವಿಶೇಷವಾಗಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಪರಿಹಾರ ವಿತರಣಾ ಯೋಜನೆಯನ್ನು ಜಾರಿಗೆ ತಂದ ಅವರ ಕಾಳಜಿ ಇಂದಿಗೂ ಸ್ಮರಣೀಯ,” ಎಂದು ಕೃತಜ್ಞತೆ ಸಲ್ಲಿಸಿದರು.
ಅಲ್ಲದೆ, ತಮ್ಮ ತಂದೆಯವರೊಂದಿಗೆ ಭೀಮಣ್ಣ ಖಂಡ್ರೆ ಅವರಿಗಿದ್ದ ಆತ್ಮೀಯ ಒಡನಾಟದ ನೆನಪುಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ರಾಜ್ಯದ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದ ಪ್ರಮುಖ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು: ಸಿದ್ದರಾಮಯ್ಯ (ಮಾನ್ಯ ಮುಖ್ಯಮಂತ್ರಿಗಳು), ಮಲ್ಲಿಕಾರ್ಜುನ ಖರ್ಗೆ (ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರು), ಬಸವರಾಜ ಹೊರಟ್ಟಿ (ವಿಧಾನ ಪರಿಷತ್ ಸಭಾಪತಿಗಳು), ವಿ. ಸೋಮಣ್ಣ (ಕೇಂದ್ರ ಸಚಿವರು), ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ (ಮಾಜಿ ಮುಖ್ಯಮಂತ್ರಿಗಳು), ನಾಡಿನ ವಿವಿಧ ಮಠಾಧೀಶರುಗಳು, ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಶರಣ-ಶರಣೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಲೋಕನಾಯಕರಿಗೆ ಗೌರವ ಸಲ್ಲಿಸಿದರು.







