ಬೆಳಗಾವಿ : ರಾಜ್ಯದ ಕಾಂಗ್ರೆಸ್ ಸರ್ಕಾರವು ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ಮಗ್ನವಾಗಿದ್ದು, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಹಿಂದುಳಿದ ವರ್ಗಗಳು (OBC), ಪರಿಸಿಷ್ಠ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ವೈಫಲ್ಯಗಳ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸಲು ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಹಾಸ್ಟೆಲ್ ಸೌಲಭ್ಯದ ಕೊರತೆ: ರಾಜ್ಯದಲ್ಲಿ ಸುಮಾರು 1.41 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸಿಗುತ್ತಿಲ್ಲ. ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಸರ್ಕಾರ, ವಿದ್ಯಾರ್ಥಿಗಳನ್ನು ಬೀದಿಪಾಲು ಮಾಡುತ್ತಿದೆ ಎಂದು ಆರೋಪಿಸಲಾಯಿತು.
ಖಾಲಿ ಇರುವ ಸರ್ಕಾರಿ ಹುದ್ದೆಗಳು: ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದರಿಂದ ಆಡಳಿತ ಯಂತ್ರ ಕುಂಠಿತಗೊಂಡಿದ್ದು, ನಿರುದ್ಯೋಗಿ ಯುವಜನತೆಗೆ ಸರ್ಕಾರ ದ್ರೋಹ ಎಸಗುತ್ತಿದೆ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.
ಅನುದಾನ ದುರುಪಯೋಗ: ಗೃಹಲಕ್ಷ್ಮಿ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳಿಗಾಗಿ ಅಭಿವೃದ್ಧಿ ಕೆಲಸಗಳ ಅನುದಾನವನ್ನು ಬಳಸಲಾಗುತ್ತಿದೆ. ಇದರಿಂದಾಗಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಶೂನ್ಯಕ್ಕೆ ಬಂದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಓಲೈಕೆ ರಾಜಕಾರಣ: ಸರ್ಕಾರವು ಅಭಿವೃದ್ಧಿಗಿಂತ ಹೆಚ್ಚಾಗಿ ಮತಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದು, ಬಹುಸಂಖ್ಯಾತ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ಕಡಿತಗೊಳಿಸಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
“ಕಾಂಗ್ರೆಸ್ ಸರ್ಕಾರದ ಈ ಜನವಿರೋಧಿ ಧೋರಣೆಯನ್ನು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಲಾಗುವುದು,” ಎಂದು ವಿಜಯೇಂದ್ರ ಅವರು ತಿಳಿಸಿದರು.
ಈ ಹೋರಾಟದ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ್, ಸುಭಾಷ್ ಪಾಟೀಲ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಿದ್ದರು.







