ಬೆಂಗಳೂರು: 2026-27ನೇ ಸಾಲಿನ ರಾಜ್ಯ ಆಯವ್ಯಯದ (Budget) ಹಿನ್ನೆಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ವತಿಯಿಂದ ಕೈಗೊಳ್ಳಬೇಕಾದ ಹೊಸ ಯೋಜನೆಗಳ ಕುರಿತು ಮಾನ್ಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ಮುಂಬರುವ ಬಜೆಟ್‌ನಲ್ಲಿ ಇಲಾಖೆಗೆ ಅಗತ್ಯವಿರುವ ಅನುದಾನದ ಬೇಡಿಕೆ ಹಾಗೂ ಜಾರಿಯಲ್ಲಿರುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಯಿತು.
ಅನುದಾನ ಹಂಚಿಕೆ: ಮುಂಬರುವ ಆರ್ಥಿಕ ವರ್ಷದಲ್ಲಿ ಇಲಾಖೆಯ ವಿವಿಧ ಜನಪರ ಯೋಜನೆಗಳಿಗೆ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡುವ ಕುರಿತು ಚರ್ಚಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಸಬಲೀಕರಣ: ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಮಕ್ಕಳ ಪೌಷ್ಟಿಕತೆ ಹಾಗೂ ರಕ್ಷಣೆಗೆ ಪೂರಕವಾದ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಶೇಷ ಆದ್ಯತೆ: ಹಿರಿಯ ನಾಗರಿಕರು ಮತ್ತು ವಿಕಲಚೇತನರ ಹಿತರಕ್ಷಣೆ ಹಾಗೂ ಅವರ ಸಬಲೀಕರಣಕ್ಕಾಗಿ ಕೈಗೆತ್ತಿಕೊಳ್ಳಬೇಕಾದ ವಿಶೇಷ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಲಾಯಿತು.
ಯೋಜನೆಗಳ ಪುನರ್ವಿಮರ್ಶೆ: ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳ ಪ್ರಗತಿ ಹಾಗೂ ಅವುಗಳನ್ನು ಇನ್ನಷ್ಟು ಜನಸ್ನೇಹಿಯಾಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಪ್ರಮುಖ ಸಭೆಯಲ್ಲಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು, ಡಾ. ಶಾಮ್ಲಾ ಇಕ್ಬಾಲ್, ಸರ್ಕಾರದ ಕಾರ್ಯದರ್ಶಿಗಳು, ಎನ್. ಮಹೇಶ್ ಬಾಬು, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿ.ಆರ್. ಅಶೋಕ್, ನಿರ್ದೇಶಕರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಡಾ. ಸ್ನೇಹಾ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ICPS), ಜಂಟಿ ನಿರ್ದೇಶಕರಾದ ಪುಷ್ಪ ರಾಯರ್, ಎಂ.ಜಿ. ಪಾಲಿ, ವಾಸಂತಿ ಉಪ್ಪಾರ್, ಸಚಿವರ ಆಪ್ತ ಕಾರ್ಯದರ್ಶಿ ಟಿ.ಎಚ್. ವಿಶ್ವನಾಥ್ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್. ಸಭೆಯಲ್ಲಿ ಉಪಸ್ಥಿತರಿದ್ದರು
ಮಹಿಳೆಯರು, ಮಕ್ಕಳು ಮತ್ತು ಸಮಾಜದ ದುರ್ಬಲ ವರ್ಗದವರ ಹಿತ ಕಾಯುವಲ್ಲಿ ಇಲಾಖೆಯು ಬದ್ಧವಾಗಿದ್ದು, ಮುಂಬರುವ ಬಜೆಟ್‌ನಲ್ಲಿ ಆಶಾದಾಯಕ ಯೋಜನೆಗಳನ್ನು ನಿರೀಕ್ಷಿಸಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.







