ಜಿಲ್ಲಾ ವರದಿಗಾರರು: “ಆಹಾರ ಭದ್ರತೆ ಎನ್ನುವುದು ಕೇವಲ ಸರ್ಕಾರಿ ಯೋಜನೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಹಕ್ಕು. ಲಿಂಗ, ಜಾತಿ ಅಥವಾ ಧರ್ಮದ ಆಧಾರದಲ್ಲಿ ಅಸಮಾನತೆ ತೋರದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆಹಾರ ಮತ್ತು ಶುದ್ಧ ನೀರು ತಲುಪಿಸುವುದು ಅಧಿಕಾರಿಗಳ ಕರ್ತವ್ಯ,” ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್. ಕೃಷ್ಣ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ ಇಂದು ನಡೆದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರ ಅನುಷ್ಠಾನ ಕುರಿತ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಅಧಿಕಾರಿಗಳ ಭೇಟಿ ಕಡ್ಡಾಯ: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಅಧಿಕಾರಿಗಳು ವಾರಕ್ಕೊಮ್ಮೆ ಖುದ್ದಾಗಿ ಭೇಟಿ ನೀಡಬೇಕು. ಮಕ್ಕಳ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರ ನೀಡಬೇಕು.
ಗುಣಮಟ್ಟದ ಪರೀಕ್ಷೆ: ಹಾಸ್ಟೆಲ್ ಮತ್ತು ಅಂಗನವಾಡಿಗಳಲ್ಲಿ ತಯಾರಾಗುವ ಆಹಾರದ ಮಾದರಿಯನ್ನು ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕು. ನಿಗದಿಪಡಿಸಿದ ಮೆನು ಪ್ರಕಾರವೇ ಪೌಷ್ಟಿಕ ಆಹಾರ ನೀಡಬೇಕು.
ಸ್ವಚ್ಛತೆಗೆ ಆದ್ಯತೆ: ಬಿಸಿಯೂಟ ತಯಾರಿಸುವ ಸ್ಥಳ, ಶೌಚಾಲಯ ಹಾಗೂ ಕುಡಿಯುವ ನೀರಿನ ತೊಟ್ಟಿಗಳು ಅತ್ಯಂತ ಸ್ವಚ್ಛವಾಗಿರಬೇಕು. ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಸ್ವಚ್ಛತಾ ಪರಿಕರಗಳನ್ನು ಬಳಸಬೇಕು ಹಾಗೂ ಅವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು.
ದಾಖಲೆಗಳ ನಿರ್ವಹಣೆ: ಮಕ್ಕಳ ಹಾಜರಾತಿ ಮತ್ತು ದಾಸ್ತಾನು ವಹಿಗಳಲ್ಲಿ ಯಾವುದೇ ವ್ಯತ್ಯಾಸವಿರಬಾರದು. ಭೌತಿಕ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.
ಸಮನ್ವಯತೆ: ಆಹಾರ ಭದ್ರತಾ ಕಾಯ್ದೆಯಡಿ ಬರುವ 14 ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಯೋಜನೆಯ ಪೂರ್ಣ ಲಾಭ ಜನರಿಗೆ ತಲುಪಲು ಸಾಧ್ಯ ಎಂದು ಅವರು ತಾಕೀತು ಮಾಡಿದರು.
ಜಿಲ್ಲಾಧಿಕಾರಿಗಳ ಭರವಸೆ:
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ, “ಆಯೋಗದ ಅಧ್ಯಕ್ಷರು ಈಗಾಗಲೇ ಜಿಲ್ಲೆಯ ವಿವಿಧ ಶಾಲೆ, ಹಾಸ್ಟೆಲ್ ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಗಮನಿಸಿದ್ದಾರೆ. ಅವರು ನೀಡಿರುವ ಎಲ್ಲಾ ಸಲಹೆ ಮತ್ತು ಸೂಚನೆಗಳನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಲಿದ್ದು, ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಲಾಗುವುದು,” ಎಂದರು.
ಅಹವಾಲು ಸಲ್ಲಿಕೆ: ಸಭೆಯ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಆಹಾರ ವಿತರಣೆ ಮತ್ತು ಹಾಸ್ಟೆಲ್ ವ್ಯವಸ್ಥೆ ಕುರಿತು ಅಹವಾಲುಗಳನ್ನು ಸಲ್ಲಿಸಿದರು. ಅಧ್ಯಕ್ಷರು ಇವುಗಳನ್ನು ಆಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು: ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಆಹಾರ ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಸುಮಂತ್ ರಾವ್, ಕೆ.ಎಸ್. ವಿಜಯಲಕ್ಷ್ಮೀ, ಎ. ರೋಹಿಣಿಪ್ರಿಯ, ಮಾರುತಿ ದೊಡ್ಡಣ್ಣನವರ್ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕಿ ವಸುಂಧರಾ ಹೆಗಡೆ ಸೇರಿದಂತೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







