ತಂಬಾಕು ಬೆಳೆಗಾರರಿಗೆ ಕೇಂದ್ರದ ಸಿಹಿ ಸುದ್ದಿ: ಕುಮಾರಸ್ವಾಮಿ ಮನವಿಗೆ ಸ್ಪಂದಿಸಿ ಶೇ. 18 ಅಬಕಾರಿ ಸುಂಕ ರದ್ದುಪಡಿಸಿದ ನಿರ್ಮಲಾ ಸೀತಾರಾಮನ್.

ನವದೆಹಲಿ, ಜ.3: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ (HD Kumaraswamy) ಪ್ರಯತ್ನದ ಫಲವಾಗಿ ಎಫ್‌ಸಿವಿ ತಂಬಾಕು ಮೇಲೆ ವಿಧಿಸಲಾಗಿದ್ದ ಶೇಕಡ 18ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಈ ತಂಬಾಕಿನ ಮೇಲೆ ಶೇಕಡ 18ರಷ್ಟು ಅಬಕಾರಿ ಸುಂಕ ವಿಧಿಸಿದ್ದರಿಂದ ಖರೀದಿದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ದೂರವೇ ಉಳಿದಿದ್ದರು. ಇದರಿಂದ ಬೆಳೆದ ಬೆಳೆ ಮಾರಾಟವಾಗದೆ ರಾಜ್ಯದ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ಅರಕಲಗೂಡು ಸೇರಿದಂತೆ ವಿವಿಧ ಭಾಗಗಳಲ್ಲಿನ ತಂಬಾಕು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು.

ಬೆಳೆಗಾರರು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಸಂಕಷ್ಟ ತೋಡಿಕೊಂಡಿದ್ದರು. ಈ ಸಂಬಂಧ ಸಚಿವರು ಬೆಂಗಳೂರಿನ ತಂಬಾಕು ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ವಿಶಾಖಪಟ್ಟಣ ವಿಭಾಗದ ಕೇಂದ್ರೀಯ ಅಬಕಾರಿ ಮತ್ತು ಜಿಎಸ್ಟಿ ಮುಖ್ಯ ಆಯುಕ್ತರ ಜತೆ ನಡೆಸಲಾಗಿದ್ದ ಪತ್ರ ವ್ಯವಹಾರಗಳ ಕುರಿತ ಎಲ್ಲಾ ಮಾಹಿತಿಯನ್ನೂ ಪಡೆದುಕೊಂಡಿದ್ದರು.

ನಂತರ ಸಚಿವರು ಈ ವಿಷಯವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಗಮನಕ್ಕೆ ತಂದು, ತಂಬಾಕು ಮೇಲಿನ ಅಬಕಾರಿ ಸುಂಕವನ್ನು ರದ್ದು ಮಾಡಬೇಕು ಎಂದು ವಿನಂತಿಸಿದ್ದರು. ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಮನವಿಗೆ ತಕ್ಷಣವೇ ಸ್ಪಂದಿಸಿರುವ ವಿತ್ತ ಸಚಿವರು, ತಂಬಾಕು ಮೇಲಿನ ಅಬಕಾರಿ ಸುಂಕ ವಿನಾಯಿತಿ ನಿರ್ಧಾರವನ್ನು ಕೈಗೊಂಡಿದ್ದಾರೆ.

ಈ ಸಂಬಂಧ ಫೆಬ್ರವರಿ 1ರಂದು ಆದೇಶ ಹೊರಡಿಸಿರುವ ತಂಬಾಕು ಮಂಡಳಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಬಕಾರಿ ಸುಂಕವನ್ನು ಹಿಂಪಡೆಯಲಾಗಿದೆ ಹಾಗೂ ಫೆಬ್ರವರಿ 5ರಿಂದಲೇ ಹರಾಜು ಪ್ರಕ್ರಿಯೆ ಆರಂಭ ಮಾಡುವಂತೆ ನಿರ್ದೇಶನ ನೀಡಿದೆ.

ವಿತ್ತ ಸಚಿವರಿಗೆ ಎಚ್‌ಡಿಕೆ ಧನ್ಯವಾದ

ತಂಬಾಕು ಹರಾಜು ವಿಷಯಕ್ಕೆ ಸಂಬಂಧಿಸಿ ತಮ್ಮ ಮನವಿಗೆ ಸ್ಪಂದಿಸಿ ಬೆಳೆಗಾರರ ಪರವಾಗಿ ಕ್ರಮ ವಹಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಧನ್ಯವಾದ ತಿಳಿಸಿದ್ದಾರೆ. ತಮ್ಮ ನಿರ್ಧಾರದಿಂದ ತಂಬಾಕು ಬೆಳೆಗಾರರರಿಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ ಎಂದು ಅವರು ವಿತ್ತ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಲ್ಲದೆ, ಈ ಸಂಬಂಧ ನನ್ನೊಂದಿಗೆ ಮಾಜಿ ಮಂತ್ರಿಗಳಾದ ಸಾ.ರಾ. ಮಹೇಶ್, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಹುಣಸೂರು ಶಾಸಕ ಜಿ.ಡಿ. ಹರೀಶ್‌ ಗೌಡ, ಅರಕಲಗೂಡು ಶಾಸಕ ಎ. ಮಂಜು, ಪಿರಿಯಾಪಟ್ಟಣ ಮಾಜಿ ಶಾಸಕ ಮಹದೇವು ಹಾಗೂ ಎಚ್.ಡಿ. ಕೋಟೆಯ ಜೆಡಿಎಸ್‌ ಪಕ್ಷದ ಹಿರಿಯ ಮುಖಂಡ ಕೃಷ್ಣ ನಾಯಕ್‌ ಮುಂತಾದವರು ನನ್ನೊಂದಿಗೆ ಚರ್ಚೆ ನಡೆಸಿದ್ದರು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

  • Related Posts

    ನವದೆಹಲಿಯಲ್ಲಿ ನಿತಿನ್ ಗಡ್ಕರಿ ಭೇಟಿ: ಧಾರವಾಡ ಕ್ಷೇತ್ರದ ರಸ್ತೆ ಅಭಿವೃದ್ಧಿ ಕುರಿತು ಪ್ರಲ್ಹಾದ್ ಜೋಶಿ ಚರ್ಚೆ

    ನವದೆಹಲಿ: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಪ್ರಮುಖ ಮಾತುಕತೆ ನಡೆಸಿದರು.…

    Continue reading
    ರಾಜ್ಯ ಪಿಯುಸಿ ಇತಿಹಾಸದಲ್ಲೇ ಹೊಸ ದಾಖಲೆ: 86.48% ಅಭೂತಪೂರ್ವ ಫಲಿತಾಂಶ

    ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿರುವ ದ್ವಿತೀಯ ಪಿಯುಸಿ ಫಲಿತಾಂಶವು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಬಾರಿ ದಾಖಲೆಯ 86.48% ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅಭೂತಪೂರ್ವ ಯಶಸ್ಸು…

    Continue reading

    Leave a Reply

    Your email address will not be published. Required fields are marked *