ಯಾದಗಿರಿ: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಿಂಥಣಿ ಬ್ರಿಜ್ ಶಾಖಾ ಮಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ಗದ್ದುಗೆಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾದ ತಿಂಥಣಿ ಬ್ರಿಜ್ ಮಠಕ್ಕೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಮಠದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಗದ್ದುಗೆಯ ದರ್ಶನ ಪಡೆದ ಬಳಿಕ ಅವರು ಮಠದ ಪೂಜ್ಯರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು.
ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್. ಜಿಲ್ಲೆಯ ಶಾಸಕರುಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರುಗಳು, ಸ್ಥಳೀಯ ಮುಖಂಡರು ಹಾಗೂ ಮಠದ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಾಜದ ಏಕತೆ ಮತ್ತು ಧಾರ್ಮಿಕ ಮೌಲ್ಯಗಳ ರಕ್ಷಣೆಯಲ್ಲಿ ಕನಕ ಗುರುಪೀಠದ ಪಾತ್ರ ಮಹತ್ವದ್ದಾಗಿದ್ದು, ಪೂಜ್ಯ ಶ್ರೀಗಳ ಆಶೀರ್ವಾದದೊಂದಿಗೆ ಜನಕಲ್ಯಾಣ ಕಾರ್ಯಗಳನ್ನು ಮುಂದುವರಿಸುವುದಾಗಿ ಈ ಸಂದರ್ಭದಲ್ಲಿ ನಾಯಕರು ತಿಳಿಸಿದರು.







