ಬೆಂಗಳೂರು: ಸಾರ್ವಜನಿಕರ ಆರೋಗ್ಯ ಮತ್ತು ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದನೆ ನೀಡುವ ಯಾವುದೇ ನೇರ ಅಥವಾ ಪರೋಕ್ಷ ಜಾಹೀರಾತುಗಳನ್ನು ಪ್ರದರ್ಶಿಸುವಂತಿಲ್ಲ.
ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ಕುರಿತು ಅಧಿಕೃತ ಟಿಪ್ಪಣಿ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಾಹೀರಾತುಗಳಿಗೆ ಬ್ರೇಕ್: ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತು ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳನ್ನು ಉತ್ತೇಜಿಸುವ ಯಾವುದೇ ರೀತಿಯ ಜಾಹೀರಾತುಗಳ ಪ್ರಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಈಗಿರುವ ಜಾಹೀರಾತುಗಳ ತೆರವಿಗೆ ಸೂಚನೆ: ಈಗಾಗಲೇ ಬಸ್ಸುಗಳಲ್ಲಿ ಅಥವಾ ನಿಲ್ದಾಣಗಳಲ್ಲಿ ತಂಬಾಕು ಸಂಬಂಧಿತ ಜಾಹೀರಾತುಗಳನ್ನು ಅಳವಡಿಸಿದ್ದರೆ, ಅವುಗಳನ್ನು ತೆಗೆದುಹಾಕಲು ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸುವಂತೆ ಸಚಿವರು ತಿಳಿಸಿದ್ದಾರೆ.
ಕಟ್ಟುನಿಟ್ಟಿನ ಕ್ರಮ: ನಿಗದಿಪಡಿಸಿದ ಸಮಯದೊಳಗೆ ಅಂತಹ ಪ್ರಚೋದನಾತ್ಮಕ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ವ್ಯಾಪ್ತಿ: ಈ ಆದೇಶವು ಕೆ.ಎಸ್.ಆರ್.ಟಿ.ಸಿ (KSRTC), ಬಿ.ಎಂ.ಟಿ.ಸಿ (BMTC), ವಾಯವ್ಯ (NWKRTC) ಮತ್ತು ಕಲ್ಯಾಣ ಕರ್ನಾಟಕ (KKRTC) ಸಾರಿಗೆ ನಿಗಮಗಳಿಗೆ ಅನ್ವಯಿಸಲಿದೆ.
ಸಾಮಾಜಿಕ ಕಳಕಳಿ: ಸಾರ್ವಜನಿಕ ಸಾರಿಗೆಯನ್ನು ಬಳಸುವ ಲಕ್ಷಾಂತರ ಪ್ರಯಾಣಿಕರ ಮೇಲೆ, ವಿಶೇಷವಾಗಿ ಯುವಜನತೆಯ ಮೇಲೆ ತಂಬಾಕು ಜಾಹೀರಾತುಗಳು ಬೀರುವ ನಕಾರಾತ್ಮಕ ಪರಿಣಾಮವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.







