ಹೆಚ್.ಡಿ. ಕೋಟೆ: ಗ್ರಾಮೀಣ ಭಾಗದ ಆರ್ಥಿಕ ಸದೃಢತೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪಾತ್ರ ದೊಡ್ಡದು ಎಂದು ಶಾಸಕ ಅನಿಲ್ ಚಿಕ್ಕಮಾದು ಅವರು ತಿಳಿಸಿದರು.
ತಮ್ಮ ಮತಕ್ಷೇತ್ರದ ಕಂಚಮಳ್ಳಿ, ಕೊತ್ತೆಗಾಲ ಹಾಗೂ ಕಾಳಿಹುಂಡಿ ಗ್ರಾಮಗಳಲ್ಲಿ ನಿರ್ಮಿಸಲಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ (ಡೈರಿ) ನೂತನ ಕಟ್ಟಡಗಳನ್ನು ಇಂದು ಶಾಸಕರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಗ್ರಾಮಗಳ ಪ್ರಗತಿಗೆ ಒತ್ತು
ನೂತನ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕರು, “ರೈತರು ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ಹೈನುಗಾರರಿಗೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ನೂತನ ಕಟ್ಟಡಗಳು ಸಹಕಾರಿಯಾಗಲಿವೆ. ಹಾಲಿನ ಗುಣಮಟ್ಟ ಕಾಪಾಡಿಕೊಂಡು ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ (ಮೈಮೂಲ್) ಅಧ್ಯಕ್ಷರಾದ ಶ್ರೀ ಈರೇಗೌಡ ಅವರು ಭಾಗವಹಿಸಿ, ಸಂಘದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮೈಮೂಲ್ ನಿರ್ದೇಶಕರಾದ ಶ್ರೀಮತಿ ದ್ರಾಕ್ಷಾಯಿಣಿ ಬಸವರಾಜಪ್ಪ ಅವರು ಉಪಸ್ಥಿತರಿದ್ದು ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಹಾಗೂ ಮೂರೂ ಗ್ರಾಮಗಳ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.







