ಬೆಂಗಳೂರು: ರಾಜ್ಯದ ನೇಕಾರರ ಆರ್ಥಿಕ ಸಬಲೀಕರಣ ಹಾಗೂ ಜವಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರೂಪಿಸಲಾಗಿರುವ ‘2025-30ರ ನೂತನ ಜವಳಿ ನೀತಿ’ ಅಂತಿಮ ಹಂತದಲ್ಲಿದೆ ಎಂದು ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಪ್ರಕಟಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ನಡೆದ ಶಾಸಕರ ಸಮಾಲೋಚನಾ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಿದ ಸಚಿವರು, ನೇಕಾರರ ಏಳಿಗೆಗೆ ಪೂರಕವಾದ ಹಲವು ಕ್ರಾಂತಿಕಾರಿ ನಿರ್ಧಾರಗಳನ್ನು ಘೋಷಿಸಿದರು.
ನೂತನ ಜವಳಿ ನೀತಿಯ ಪ್ರಮುಖ ಆಕರ್ಷಣೆಗಳು:
ಆವರ್ತ ನಿಧಿ ಸ್ಥಾಪನೆ: ಕೃಷಿ ಮಾದರಿಯಲ್ಲೇ ಕೈಮಗ್ಗ ಉತ್ಪನ್ನಗಳ ಬೆಂಬಲ ಬೆಲೆ ಮತ್ತು ಖರೀದಿಗೆ ಅನುಕೂಲವಾಗುವಂತೆ ಆವರ್ತ ನಿಧಿ ಸ್ಥಾಪಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ನೇಕಾರರ ಸಂತೆ: ಇಳಕಲ್, ರಬಕವಿ-ಬನಹಟ್ಟಿ, ದೊಡ್ಡಬಳ್ಳಾಪುರದಂತಹ ಪ್ರಮುಖ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ‘ರೈತ ಸಂತೆ’ ಮಾದರಿಯಲ್ಲಿ ನೇಕಾರರೇ ನೇರವಾಗಿ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು.
ಯುವ ನೇಕಾರರಿಗೆ ಸ್ಟೈಫಂಡ್: ನೇಕಾರಿಕೆಯಿಂದ ದೂರ ಸರಿಯುತ್ತಿರುವ ಯುವ ಪೀಳಿಗೆಯನ್ನು ಮತ್ತೆ ಈ ವೃತ್ತಿಯತ್ತ ಆಕರ್ಷಿಸಲು ವಿಶೇಷ ಸ್ಟೈಫಂಡ್ ಮತ್ತು ತರಬೇತಿ ಸೌಲಭ್ಯಗಳನ್ನು ನೀಡಲಾಗುವುದು.
ಕಲಬುರಗಿ ಟೆಕ್ಸ್‌ಟೈಲ್ ಪಾರ್ಕ್: ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಟೆಕ್ಸ್ ಟೈಲ್ ಪಾರ್ಕ್‌ನ ಮೂಲಸೌಕರ್ಯಕ್ಕೆ ₹390 ಕೋಟಿ ಮೀಸಲಿಡಲಾಗಿದೆ. ಜಾಗತಿಕ ಟೆಂಡರ್ ಮೂಲಕ ಮಾಸ್ಟರ್ ಡೆವಲಪರ್ ನೇಮಿಸಿ, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಸ್ವಂತ ಬ್ರಾಂಡ್ ಮತ್ತು ರಕ್ಷಣೆ:
“ನಮ್ಮ ನೇಕಾರರು ಕೇವಲ ಕಾರ್ಮಿಕರಾಗಿ ಉಳಿಯಬಾರದು, ಅವರೇ ಸ್ವಂತ ‘ಬ್ರಾಂಡ್’ ಸೃಷ್ಟಿಸಬೇಕು. ಹೊರ ರಾಜ್ಯದವರ ಹಾವಳಿ ತಪ್ಪಿಸಲು ಮತ್ತು ಪವರ್ ಲೂಮ್ ಕಾಯ್ದೆ ತಿದ್ದುಪಡಿಗಾಗಿ ಶೀಘ್ರದಲ್ಲೇ ಶಾಸಕರ ನಿಯೋಗದೊಂದಿಗೆ ಕೇಂದ್ರ ಸರ್ಕಾರಕ್ಕೆ ಭೇಟಿ ನೀಡಿ ಒತ್ತಾಯಿಸಲಾಗುವುದು,” ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಕೇಶವಪ್ರಸಾದ್, ಎಂ.ವೈ. ಪಾಟೀಲ್, ಮಾಜಿ ಶಾಸಕರಾದ ಎಂ.ಡಿ. ಲಕ್ಷ್ಮೀನಾರಾಯಣಸ್ವಾಮಿ, ವೆಂಕಟರಮಣಪ್ಪ ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು. ಅಧಿಕಾರಿಗಳ ಪರವಾಗಿ ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಜವಳಿ ಆಯುಕ್ತೆ ಜ್ಯೋತಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.







