ಬಳ್ಳಾರಿ ಫೈರಿಂಗ್ ಕೇಸ್: ಶಾಸಕರ ಆಪ್ತನ ಗನ್‌ಮ್ಯಾನ್ ಅರೆಸ್ಟ್; 26 ಆರೋಪಿಗಳು ಬೆಂಗಳೂರಿಗೆ ಶಿಫ್ಟ್

ಬಳ್ಳಾರಿ: ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಮತ್ತು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ರಾಜಶೇಖರ್ ಮೃತಪಟ್ಟಿರುವುದು ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿಯ ಗನ್‌ಮ್ಯಾನ್ ನಡೆಸಿದ ಗುಂಡಿನ ದಾಳಿಯಿಂದಲೇ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

12 ಎಂಎಂ ಬುಲೆಟ್ ರಹಸ್ಯ ಬಯಲು

ಮೃತ ರಾಜಶೇಖರ್ ಅವರ ದೇಹದ ಮರಣೋತ್ತರ ಪರೀಕ್ಷೆಯ ವೇಳೆ 12 ಎಂಎಂ ಸಿಂಗಲ್ ಬೋರ್ ಬುಲೆಟ್ ಪತ್ತೆಯಾಗಿದೆ. ಈ ಗುಂಡನ್ನು ಪಂಜಾಬ್ ಮೂಲದ ಗನ್‌ಮ್ಯಾನ್ ಗುರುಚರಣ್ ಸಿಂಗ್ ಎಂಬಾತ ಹಾರಿಸಿದ್ದಾನೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.

ತನಿಖಾ ವಿವರ: ಕೇವಲ 4-5 ಅಡಿ ದೂರದಿಂದ ಗುಂಡು ಹಾರಿದ್ದರಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಒಂದು ವೇಳೆ 10 ಅಡಿಗಿಂತ ದೂರದಿಂದ ಹಾರಿಸಿದ್ದರೆ ಬುಲೆಟ್ ಚದುರಿ (Spread) ಇನ್ನು ಹೆಚ್ಚಿನ ಪ್ರಾಣಹಾನಿಯಾಗುವ ಸಂಭವವಿತ್ತು ಎಂದು ತನಿಖಾ ವರದಿ ತಿಳಿಸಿದೆ.

ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಚರಣ್ ಸಿಂಗ್ ಸೇರಿದಂತೆ ಬಲ್ಜಿತ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಎಂಬ ಮೂವರು ಗನ್‌ಮ್ಯಾನ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

26 ಆರೋಪಿಗಳು ಬೆಂಗಳೂರಿಗೆ ಶಿಫ್ಟ್

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಒಟ್ಟು 45 ಜನರನ್ನು ವಿಚಾರಣೆ ನಡೆಸಿದ್ದು, ಅದರಲ್ಲಿ ಬಿಜೆಪಿಯ 13 ಕಾರ್ಯಕರ್ತರು ಸೇರಿದಂತೆ ಒಟ್ಟು 26 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ವೈದ್ಯಕೀಯ ಪರೀಕ್ಷೆಯ ಬಳಿಕ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರಲಾಗುತ್ತಿದೆ.

ಪೆಟ್ರೋಲ್ ಬಾಂಬ್ ದಾಳಿಯ ಸಂಚು?

ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ನಡೆಸಲು ಮೊದಲೇ ಪ್ಲಾನ್ ಮಾಡಲಾಗಿತ್ತೇ ಎಂಬ ಸಂಶಯಕ್ಕೆ ಪುಷ್ಟಿ ನೀಡುವಂತಹ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಆಟೋವೊಂದರಲ್ಲಿ ಕಿಡಿಗೇಡಿಗಳು ಖಾಲಿ ಬಾಟಲ್ ಹಾಗೂ ಪೆಟ್ರೋಲ್ ಬಾಂಬ್‌ಗಳನ್ನು ತುಂಬಿಕೊಂಡು ಬಂದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಪತ್ತೆಯಾಗಿದೆ.

ಝೆಡ್ (Z) ಶ್ರೇಣಿ ಭದ್ರತೆಗೆ ಜನಾರ್ದನ ರೆಡ್ಡಿ ಮನವಿ

ಘಟನೆಯ ಬೆನ್ನಲ್ಲೇ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಜೀವಬೆದರಿಕೆ ಇದೆ ಎಂದು ಜನಾರ್ದನ ರೆಡ್ಡಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ‘ಝೆಡ್’ ಶ್ರೇಣಿಯ ಭದ್ರತೆಗೆ ಬೇಡಿಕೆ ಇಟ್ಟಿದ್ದಾರೆ. ಶಾಸಕ ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿಯನ್ನು ಕೂಡಲೇ ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರದ ಮುಂದಿನ ನಡೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಪೊಲೀಸ್ ಗನ್‌ನಿಂದ ಫೈರಿಂಗ್ ಆಗಿಲ್ಲ ಎಂಬುದು ಖಚಿತವಾಗಿದೆ. ಖಾಸಗಿ ಬಂದೂಕಿನಿಂದ ಗುಂಡು ಹಾರಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಇದನ್ನು ಸಿಐಡಿ (CID) ತನಿಖೆಗೆ ಒಪ್ಪಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

  • Related Posts

    ಮುಳ್ಳೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ: ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗಿ

    ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮಹೋತ್ಸವವನ್ನು ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ಆಚರಿಸಲಾಯಿತು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ…

    Continue reading
    ಶಾಸಕ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್

    ಬೆಂಗಳೂರು: ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಹೊಸೂರು ಮುಖ್ಯರಸ್ತೆಯ ಕೊನಪ್ಪನ ಅಗ್ರಹಾರದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಹಿರಿಯೂರು ಶಾಸಕ ಶ್ರೀ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯನ್ನು…

    Continue reading

    Leave a Reply

    Your email address will not be published. Required fields are marked *