ಬಳ್ಳಾರಿ ಹತ್ಯೆ ಕೇಸ್: “ಡಬಲ್ ಪೋಸ್ಟ್ ಮಾರ್ಟಂ ಅಸತ್ಯವಾದರೆ ಅಧೀಕ್ಷಕರಿಗೆ ಬ್ರೈನ್ ಮ್ಯಾಪಿಂಗ್ ಮಾಡಿಸಿ” – ಎಚ್‌ಡಿಕೆ ಸವಾಲು

ಬೆಂಗಳೂರು: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ವೇಳೆ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತದೇಹದ ಮರಣೋತ್ತರ ಪರೀಕ್ಷೆ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. “ಸತ್ತ ಶರೀರವನ್ನೂ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಮರಣೋತ್ತರ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಲೋಪಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಶ್ನೆಗಳನ್ನು ಎಸೆದಿದ್ದಾರೆ.

ಪೋಸ್ಟ್ ಮಾರ್ಟಂ ಸುತ್ತ ಮಾಯಾಜಾಲ?

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಎಚ್‌ಡಿಕೆ, ಮೃತದೇಹಕ್ಕೆ ಎರಡು ಬಾರಿ ಪೋಸ್ಟ್ ಮಾರ್ಟಂ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಪರಮೇಶ್ವರ್ ಅವರು ಇದನ್ನು ನಿರಾಕರಿಸಿದ್ದರು. ಇಂದು ಮರುದಾಳಿ ನಡೆಸಿರುವ ಕುಮಾರಸ್ವಾಮಿ, “ನಾನು ಹೇಳಿದ್ದು ಅಕ್ಷರಶಃ ಸತ್ಯ. ಒಂದು ವೇಳೆ ನನ್ನ ಮಾತು ಸುಳ್ಳಾಗಿದ್ದರೆ ಬಿಮ್ಸ್ (BIMS) ಅಧೀಕ್ಷಕರನ್ನು ತಕ್ಷಣವೇ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಿ. ಆಗ ನಿಮ್ಮ ಪೋಸ್ಟ್ ಮಾರ್ಟಂ ಮಾಯಾಜಾಲ ಬಯಲಾಗುತ್ತದೆ,” ಎಂದು ಸವಾಲು ಹಾಕಿದ್ದಾರೆ.

ಸರ್ಕಾರದ ವಿರುದ್ಧ ಕುಮಾರಸ್ವಾಮಿ ಅವರ ಪ್ರಮುಖ ಪ್ರಶ್ನೆಗಳು:

ಒಬ್ಬ ವೈದ್ಯರು ಸಾಲದೇ?: ಬಿಮ್ಸ್ ಅಧೀಕ್ಷಕರೇ ಹೇಳುವಂತೆ ಪೋಸ್ಟ್ ಮಾರ್ಟಂ 3 ಗಂಟೆ ವಿಳಂಬವಾಯಿತು. ಮೊದಲ ವೈದ್ಯರೇ ಪರೀಕ್ಷೆ ಮುಗಿಸಬಹುದಾಗಿತ್ತಲ್ಲವೇ? ಮಧ್ಯದಲ್ಲಿ ಇನ್ನೊಬ್ಬ ವೈದ್ಯರನ್ನು ಕರೆಸಿಕೊಂಡ ಗುಟ್ಟೇನು?

ತಜ್ಞರೇಕೆ ಬರಲಿಲ್ಲ?: ಪರೀಕ್ಷೆ ಸಂಕೀರ್ಣವಾಗಿದ್ದರೆ ಫೋರೆನ್ಸಿಕ್ ತಜ್ಞರನ್ನು ಕರೆಯಿಸಬೇಕಿತ್ತು. ಹಾಗಿದ್ದ ಮೇಲೆ ಸಾಮಾನ್ಯ ವೈದ್ಯರನ್ನು ಕರೆಸಿದ್ದೇಕೆ? ಮರಣೋತ್ತರ ಪರೀಕ್ಷೆ ವೇಳೆ ನೀವು ಜೀವ ಉಳಿಸಬೇಕಿತ್ತಾ ಅಥವಾ ಸತ್ಯ ಹುಡುಕಬೇಕಿತ್ತಾ?

ವೈದ್ಯರ ನಡುವೆ ತಿಕ್ಕಾಟ: ಪೋಸ್ಟ್ ಮಾರ್ಟಂ ವೇಳೆ ಆ ಇಬ್ಬರು ವೈದ್ಯರ ನಡುವೆ ಏನೆಲ್ಲಾ ತಿಕ್ಕಾಟ ನಡೆದಿದೆ ಎಂಬುದು ಕೂಡ ನನಗೆ ಗೊತ್ತು. ಸರ್ಕಾರ ಪ್ರಕರಣ ಮುಚ್ಚಿಹಾಕಲು ಮಹಾನ್ ಹರಸಾಹಸ ಮಾಡುತ್ತಿದೆ.

‘ಮನೆಹಾಳು ರಾಜಕೀಯ’ಕ್ಕೆ ಕಿಡಿ

“ನಿಮ್ಮದೇ ಪಕ್ಷದ ನತದೃಷ್ಟ ಕಾರ್ಯಕರ್ತನ ಶವವನ್ನೂ ನಿಮ್ಮ ಮನೆಹಾಳು ರಾಜಕೀಯಕ್ಕೆ ಬಳಸಿಕೊಂಡಿದ್ದನ್ನು ನಾನು ರಾಜ್ಯದ ಜನತೆಯ ಗಮನಕ್ಕೆ ತಂದಿದ್ದೇನೆ. ತನಿಖೆಯ ದಿಕ್ಕು ತಪ್ಪಿಸಲು ಅಥವಾ ಸಮಾಜವನ್ನು ಹಾಳು ಮಾಡಲು ನಾನು ಈ ಮಾತುಗಳನ್ನು ಹೇಳುತ್ತಿಲ್ಲ,” ಎಂದು ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ನಡೆಯನ್ನು ಕಟುವಾಗಿ ಖಂಡಿಸಿದ್ದಾರೆ.

ಬಳ್ಳಾರಿಯಲ್ಲಿ ಜ.1 ರಂದು ನಡೆದಿದ್ದ ಬ್ಯಾನರ್ ಗಲಭೆ ಈಗ ವೈದ್ಯಕೀಯ ವರದಿಗಳ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿ ಮಾರ್ಪಟ್ಟಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸುತ್ತಿವೆ.

  • Related Posts

    ಮುಳ್ಳೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ: ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗಿ

    ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮಹೋತ್ಸವವನ್ನು ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ಆಚರಿಸಲಾಯಿತು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ…

    Continue reading
    ಶಾಸಕ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್

    ಬೆಂಗಳೂರು: ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಹೊಸೂರು ಮುಖ್ಯರಸ್ತೆಯ ಕೊನಪ್ಪನ ಅಗ್ರಹಾರದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಹಿರಿಯೂರು ಶಾಸಕ ಶ್ರೀ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯನ್ನು…

    Continue reading

    Leave a Reply

    Your email address will not be published. Required fields are marked *