ಕೋಗಿಲು ಲೇಔಟ್ ನಿರಾಶ್ರಿತರಿಗೆ ಮನೆ ಮಂಜೂರು: “ಕನ್ನಡಿಗರಿಗೆ ಮೊದಲ ಆದ್ಯತೆ” – ಸಚಿವರ ಕಡಕ್ ಸೂಚನೆ

ಬೆಂಗಳೂರು: ವಿವಾದಿತ ಕೋಗಿಲು ಲೇಔಟ್‌ನಲ್ಲಿ ಗುಡಿಸಲು ಹಾಕಿಕೊಂಡಿರುವ ನಿರಾಶ್ರಿತರಿಗೆ ಮಾನವೀಯತೆಯ ಆಧಾರದ ಮೇಲೆ ಮನೆ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ‘ಕನ್ನಡಿಗರಿಗೆ ಮೊದಲ ಆದ್ಯತೆ’ ನೀಡಬೇಕು ಮತ್ತು ಭೂ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಸೋಮವಾರ ನಡೆದ ಜಂಟಿ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಅವರು ಕೋಗಿಲು ಕ್ರಾಸ್ ಪ್ರಕರಣವನ್ನು ಕೂಲಂಕಷವಾಗಿ ಚರ್ಚಿಸಿ ಹಲವು ನಿರ್ಧಾರಗಳನ್ನು ಪ್ರಕಟಿಸಿದರು.

ಭೂ ಒತ್ತುವರಿ ಸಹಿಸುವುದಿಲ್ಲ

ಸಭೆಯಲ್ಲಿ ಮಾತನಾಡಿದ ಸಚಿವರು, “ಸರ್ಕಾರಿ ಜಮೀನಿನಲ್ಲಿ ಯಾರಿಗೋ ಹಣ ನೀಡಿ ಒತ್ತುವರಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಶೆಡ್ ಹಾಕಿದ ಕೂಡಲೇ ಮನೆ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದು ಸರ್ಕಾರಿ ಜಮೀನು ಒತ್ತುವರಿಗೆ ಪರೋಕ್ಷ ಕುಮ್ಮಕ್ಕು ನೀಡಿದಂತಾಗುತ್ತದೆ. ಎಷ್ಟೋ ಜನ ಅಧಿಕೃತವಾಗಿ ಅರ್ಜಿ ಸಲ್ಲಿಸಿ ಮನೆಗಾಗಿ ಕಾಯುತ್ತಿರುವಾಗ, ಒತ್ತುವರಿದಾರರಿಗೆ ಏಕಾಏಕಿ ಮನೆ ನೀಡುವುದು ನ್ಯಾಯವಲ್ಲ,” ಎಂದು ಎಚ್ಚರಿಸಿದರು.

ಮನೆ ಹಂಚಿಕೆಗೆ ಮಾನದಂಡಗಳು:

ನಿರಾಶ್ರಿತರಿಗೆ ಮನೆ ನೀಡುವಾಗ ಈ ಕೆಳಗಿನ ಕಠಿಣ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ:

ಕನ್ನಡಿಗರಿಗೆ ಆದ್ಯತೆ: ಕರ್ನಾಟಕದ ಮೂಲದವರಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರೆ ಅಂತಹವರಿಗೆ ಮೊದಲ ಆದ್ಯತೆ ನೀಡಬೇಕು.

ವಾಸದ ಅವಧಿ: ಕನ್ನಡಿಗರಾಗಿದ್ದು, ಕೋಗಿಲು ಲೇಔಟ್‌ನಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ನೆಲೆಸಿದ್ದರೆ ಅವರನ್ನು ಆದ್ಯತೆಯಾಗಿ ಪರಿಗಣಿಸಬೇಕು.

ಮೂಲದ ಪರಿಶೀಲನೆ: ಮಾತೃಭಾಷೆ ಬೇರೆ ಇದ್ದರೂ ತಲೆಮಾರಿನಿಂದ ಕರ್ನಾಟಕದಲ್ಲಿ ವಾಸವಿದ್ದು ವಲಸೆ ಬಂದಿದ್ದರೆ, ಅವರ ಮೂಲ ಊರಿನ ವಿಎ (VA) ಮೂಲಕ ಪರಿಶೀಲನೆ ನಡೆಸಿದ ನಂತರವಷ್ಟೇ ಮನೆ ನೀಡಬೇಕು.

ಹೊರ ರಾಜ್ಯದವರಿಗೆ ನಿಯಮ: ಉತ್ತರ ಪ್ರದೇಶ, ಬಿಹಾರ ಮೂಲದ ಕುಟುಂಬಗಳೂ ಇಲ್ಲಿರುವ ಮಾಹಿತಿ ಇದೆ. ಕರ್ನಾಟಕದವರಲ್ಲದವರು ಕನಿಷ್ಠ 5 ವರ್ಷ ರಾಜ್ಯದಲ್ಲಿ ನೆಲೆಸಿದ್ದರೆ, ಅವರು ಸರ್ಕಾರದ ‘1 ಲಕ್ಷ ಮನೆ’ ಯೋಜನೆಯಡಿ ಅರ್ಜಿ ಸಲ್ಲಿಸಿ ಮನೆ ಪಡೆಯಲು ಅವಕಾಶವಿದೆ.

ಒಂದು ಕುಟುಂಬಕ್ಕೆ ಒಂದು ಮನೆ: ಒಂದೇ ಕುಟುಂಬದವರು ಎರಡು ಅರ್ಜಿ ಸಲ್ಲಿಸಿದ್ದರೆ, ರೇಷನ್ ಕಾರ್ಡ್ ಆಧಾರದ ಮೇಲೆ ಕೇವಲ ಒಂದು ಮನೆ ಮಾತ್ರ ನೀಡಬೇಕು.

    ಪಕೀರ್ ಕಾಲೋನಿ ನಿವಾಸಿಗಳಿಗೆ ಶೀಘ್ರ ಮನೆ

    ಪಕೀರ್ ಕಾಲೋನಿಯಲ್ಲಿರುವ 35 ಮನೆಗಳ ಪೈಕಿ ಬಹುಪಾಲು ಜನ ಅರ್ಹರಾಗಿದ್ದಾರೆ. ಈ ಪೈಕಿ 25 ರಿಂದ 30 ಜನರಿಗೆ ಗುರುವಾರದ ಒಳಗೆ ಮನೆ ನೀಡಬೇಕು. ಉಳಿದ ಅರ್ಹರಿಗೂ ಹಂತ ಹಂತವಾಗಿ ಮನೆ ನೀಡುವ ಪ್ರಕ್ರಿಯೆ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

    “ಬಡವರು ಬಡವರೇ, ಭಾರತೀಯರು ಭಾರತೀಯರೇ. ಆದರೆ ನಮ್ಮ ಸರ್ಕಾರದ ಮೊದಲ ಆದ್ಯತೆ ಕನ್ನಡಿಗರಿಗೆ. ಹೊರ ರಾಜ್ಯದವರ ತಪಾಸಣೆಯ ನೆಪದಲ್ಲಿ ಕನ್ನಡಿಗರಿಗೆ ಮನೆ ನೀಡುವುದನ್ನು ತಡ ಮಾಡಬಾರದು.” — ಸಚಿವರ ಜಂಟಿ ಹೇಳಿಕೆ.

    ತನಿಖೆಗೆ ಆದೇಶ

    ಕೋಗಿಲು ಲೇಔಟ್‌ನಲ್ಲಿ ಗುಡಿಸಲು ಹಾಕಿಕೊಂಡಿರುವವರು ಮೂಲತಃ ಎಲ್ಲಿಂದ ಬಂದವರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಅರ್ಹ ಬಡವರಿಗೆ ಅನ್ಯಾಯವಾಗದಂತೆ ಮತ್ತು ಕಾನೂನುಬದ್ಧವಾಗಿ ಮನೆ ಹಂಚಿಕೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.

  1. Related Posts

    ಮುಳ್ಳೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ: ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗಿ

    ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಮಹೋತ್ಸವವನ್ನು ಅತ್ಯಂತ ಸಡಗರ ಮತ್ತು ಗೌರವಪೂರ್ವಕವಾಗಿ ಆಚರಿಸಲಾಯಿತು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಹಾಗೂ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ…

    Continue reading
    ಶಾಸಕ ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್

    ಬೆಂಗಳೂರು: ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಹೊಸೂರು ಮುಖ್ಯರಸ್ತೆಯ ಕೊನಪ್ಪನ ಅಗ್ರಹಾರದಲ್ಲಿರುವ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಹಿರಿಯೂರು ಶಾಸಕ ಶ್ರೀ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯನ್ನು…

    Continue reading

    Leave a Reply

    Your email address will not be published. Required fields are marked *