ಮಡಿಕೇರಿ: ಸದಾ ಲೇಖನಿ ಹಿಡಿದು ಸುದ್ದಿಯ ಹಿಂದೆ ಓಡುತ್ತಿದ್ದ ಪತ್ರಕರ್ತರು ಇಂದು ಬುಟ್ಟಿ ಹಿಡಿದು ಕಾಫಿ ತೋಟಕ್ಕೆ ಇಳಿದಿದ್ದರು! ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ಕಾಫಿ ಕೊಯ್ಲು’ ಸ್ಪರ್ಧೆಯಲ್ಲಿ ಜಿಲ್ಲೆಯ ಪತ್ರಕರ್ತರು ಶ್ರಮಜೀವಿಗಳಾಗಿ ಮಿಂಚಿದರು.
ಕುಟ್ಟಂದಿ ಬಳಿಯ ಚೇರಂಡ ಜಗನ್ ಅವರ ತೋಟದಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ, ಕೃಷಿ ವರದಿಗಳ ಮೂಲಕ ರೈತರ ಧ್ವನಿಯಾಗುತ್ತಿದ್ದ ಪತ್ರಕರ್ತರು, ಸ್ವತಃ ಕಾಫಿ ಕೊಯ್ಲು ಮಾಡುವ ಮೂಲಕ ಬೆಳೆಗಾರರು ಮತ್ತು ಕಾರ್ಮಿಕರ ಸಂಕಷ್ಟ ಹಾಗೂ ಅನುಭವಗಳನ್ನು ಹತ್ತಿರದಿಂದ ಅರಿಯುವ ಪ್ರಯತ್ನ ಮಾಡಿದರು.
ಸ್ಪರ್ಧೆಯ ಉದ್ಘಾಟನೆ ಮತ್ತು ಶಾಸಕರ ಹಾರೈಕೆ
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಸ್ವತಃ ಕಾಫಿ ಕೊಯ್ಲು ಮಾಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಇದು ಕಾಫಿ ಕೊಯ್ಲಿನ ಸುಗ್ಗಿ ಕಾಲ. ಕೊಡಗಿನ ಬೆಳೆಗಾರರಿಗೆ ಈ ಬಾರಿ ಉತ್ತಮ ಫಸಲು ಮತ್ತು ಬೆಲೆ ಸಿಗಲಿ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿರುವುದು ಆಶಾದಾಯಕ ಬೆಳವಣಿಗೆ,” ಎಂದು ಹಾರೈಸಿದರು.
ತೀವ್ರ ಪೈಪೋಟಿ: ವಿಜೇತರ ವಿವರ
ತಲಾ ಇಬ್ಬರು ಪತ್ರಕರ್ತರಿರುವ 8 ತಂಡಗಳಿಗೆ ಅರ್ಧ ಗಂಟೆಯ ಕಾಲಾವಕಾಶ ನೀಡಲಾಗಿತ್ತು. ಅತ್ಯಂತ ವೇಗವಾಗಿ ಮತ್ತು ಶಿಸ್ತುಬದ್ಧವಾಗಿ ಕಾಫಿ ಕುಯ್ದ ತಂಡಗಳು ಬಹುಮಾನ ಮುಡಿಗೇರಿಸಿಕೊಂಡವು:
ಪ್ರಥಮ – ಪಳೆಯಂಡ ಪಾರ್ಥ ಚಿಣ್ಣಪ್ಪ ಮತ್ತು ಮಂಡೇಡ ಅಶೋಕ್
ದ್ವಿತೀಯ – ಅಜ್ಜಮಾಡ ರಮೇಶ್ ಕುಟ್ಟಪ್ಪ – ಸುನಿಲ್ ಪೊನ್ನೇಟಿ ತಂಡ ಮತ್ತು ಬಾಚರಣಿಯಂಡ ಅನು ಕಾರ್ಯಪ್ಪ – ರಿಜ್ವಾನ್ ಹುಸೇನ್ ತಂಡ
ಇದಲ್ಲದೆ ಶಿವಕುಮಾರ್-ದಿವಾಕರ್ ಜಾಕಿ, ವಿಶ್ವ-ಚಂದ್ರಮೋಹನ್, ಪ್ರಭುದೇವ್-ವಾಸು ಸೇರಿದಂತೆ ಇತರ ತಂಡಗಳು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡವು.
ರೈತರ ನೋವು-ನಲಿವಿಗೆ ಸ್ಪಂದನೆ
ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಬಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಕೊಲ್ಲೀರ ಬೋಪಣ್ಣ, ಪತ್ರಕರ್ತರ ಈ ವಿನೂತನ ಪ್ರಯತ್ನವನ್ನು ಶ್ಲಾಘಿಸಿದರು. “ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಪತ್ರಕರ್ತರು, ಈ ಕಾರ್ಯಕ್ರಮದ ಮೂಲಕ ಕೃಷಿಕರ ಬದುಕನ್ನು ಪ್ರಾಯೋಗಿಕವಾಗಿ ತಿಳಿದುಕೊಂಡಿರುವುದು ಸ್ತುತ್ಯಾರ್ಹ,” ಎಂದರು.







