ಬೆಳಗಾವಿ: ಅಥಣಿ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಅವರ ಪುತ್ರ ಚಿದಾನಂದ ಸವದಿ ಅವರು ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಲೇಬರ್ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಗಂಭೀರ ಆರೋಪ ಮಾಡಿದ್ದಾರೆ.
ಈ ಘಟನೆಯಿಂದ ಬೆಳಗಾವಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದ್ದು, ಗಾಯಾಳು ನಿಂಗಪ್ಪ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:
ನಿಂಗಪ್ಪ ಕರೆಣ್ಣವರ ಅವರ ಹೇಳಿಕೆಯ ಪ್ರಕಾರ, “ಮಾತುಕತೆ ನಡೆಸುವ ಉದ್ದೇಶದಿಂದ ಲಕ್ಷ್ಮಣ ಸವದಿ ಅವರು ತಮ್ಮ ಮನೆಗೆ ಕರೆಸಿಕೊಂಡಿದ್ದರು. ಆದರೆ ಅಲ್ಲಿಗೆ ಹೋದಾಗ ಯಾವುದೇ ಚರ್ಚೆ ಮಾಡದೆ, ಏಕಾಏಕಿ ಶಾಸಕರು ಮತ್ತು ಅವರ ಪುತ್ರ ಚಿದಾನಂದ ಸವದಿ ಸೇರಿ ತಲೆಗೆ ತೀವ್ರವಾಗಿ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.”
ಹಲ್ಲೆಗೊಳಗಾದ ನಂತರ ನಿಂಗಪ್ಪ ಅವರು ಶಾಸಕರ ಮನೆಯ ಹತ್ತಿರದಲ್ಲೇ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
‘ನ್ಯಾಯ ಸಿಗದಿದ್ದರೆ ಆತ್ಮಹತ್ಯೆ’ – ವೀಡಿಯೋ ಸಂದೇಶ:
ಆಸ್ಪತ್ರೆಯಿಂದಲೇ ವೀಡಿಯೋ ಸಂದೇಶ ಬಿಡುಗಡೆ ಮಾಡಿರುವ ನಿಂಗಪ್ಪ ಕರೆಣ್ಣವರ, ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
“ಲಕ್ಷ್ಮಣ ಸವದಿ ಮತ್ತು ಅವರ ಮಗ ನನ್ನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ್ದಾರೆ. ಸರ್ಕಾರ ತಕ್ಷಣವೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನನಗೆ ನ್ಯಾಯ ಸಿಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಸಾವಿಗೆ ಸವದಿ ಕುಟುಂಬವೇ ನೇರ ಹೊಣೆಯಾಗುತ್ತದೆ,” ಎಂದು ಅವರು ವೀಡಿಯೋದಲ್ಲಿ ಎಚ್ಚರಿಸಿದ್ದಾರೆ.







