ಬೆಂಗಳೂರು: ಗ್ರಾಮೀಣ ಭಾಗದ ಜನತೆ ಸುಲಭವಾಗಿ ತಮ್ಮ ಜಮೀನಿನ ಇ-ಖಾತೆಯನ್ನು ಪಡೆಯುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಇ-ಸ್ವತ್ತು ತಂತ್ರಾಂಶ 2.0 ಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಒಟ್ಟು 8,886 ಅರ್ಜಿಗಳನ್ನು ಆನ್‍ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ತಂತ್ರಾಂಶ ಸಿದ್ಧಪಡಿಸಿರುವ ಎನ್.ಐ.ಸಿ ತಂತ್ರಾಂಶದ ದೋಷದಿಂದಾಗಿ ಕೆಲವೊಂದು ಅರ್ಜಿಗಳನ್ನು ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅವುಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶ 2.0 ವನ್ನು ನಿಯಮಗಳನ್ವಯ ಮಾರ್ಪಡು ಮಾಡಲಾಗಿದ್ದು, ಸಾರ್ವಜನಿಕರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಲಾಗಿನ್ ಸೃಜಿಸಲಾಗಿರುತ್ತದೆ. ಇ-ಸ್ವತ್ತು ತಂತ್ರಾಂಶ 2.0 ಅನ್ನು ʼಭೂಮಿʼ, ʼಕಾವೇರಿʼ ʼಪಂಚತಂತ್ರʼ ʼಮೋಜಿಣಿʼ ಹಾಗೂ ‘ಎಸ್ಕಾಂ’ಗಳ ತಂತ್ರಾಂಶಗಳೊಂದಿಗೆ ಸಂಯೋಜಿಸಲಾಗಿರುತ್ತದೆ. ಸದರಿ ಸಂಯೋಜನೆಯಿಂದ ತಾಂತ್ರಿಕ ಸಮಸ್ಯೆಗಳು/API ಸಮಸ್ಯೆಗಳು ಉಂಟಾಗಿದೆ.
ನಿಯಮಗಳಿಗೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಹಾಯಕ್ಕಾಗಿ ಇಲಾಖೆ ವತಿಯಿಂದ ಸಹಾಯವಾಣಿ ಸಂಖ್ಯೆ 9483476000 ಅನ್ನು ಪ್ರಾರಂಭಿಸಲಾಗಿದೆ. ಪ್ರತಿದಿನ ಸರಾಸರಿ ಮೂರು ಸಾವಿರಕ್ಕೂ ಹೆಚ್ಚು ಕರೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗುತ್ತಿದೆ. ಅದೇ ರೀತಿ ಜಿಲ್ಲಾ ಸಹಾಯವಾಣಿಗಳನ್ನು ಪ್ರಾರಂಭಿಸಲಾಗಿದ್ದು, ಜಿಲ್ಲಾ ಸಹಾಯವಾಣಿಗಳ ಸಂಖ್ಯೆಯನ್ನು https://eswathu.karnataka.gov.in/Login.aspx ರಲ್ಲಿ “ಸಂಪರ್ಕಿಸಿ” ಶೀರ್ಷಿಕೆಯಡಿ ಹಾಗೂ https://panchatantra.karnataka.gov.in ರಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಸಹಾಯವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದ್ದು, ಮತ್ತೊಮ್ಮೆ ಪುನಶ್ಚೇತನ ತರಬೇತಿಯನ್ನು ಆಯೋಜಿಸಲಾಗಿದೆ.
ಇ-ಸ್ವತ್ತು ಆನ್‌ಲೈನ್ ಅರ್ಜಿಗಳಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುತ್ತಿದೆ. ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಿಸಲು ಕ್ರಮವಹಿಸಲಾಗುತ್ತಿದೆ. ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿರುವುದಿಲ್ಲ, ಆದ್ದರಿಂದ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಇ-ಸ್ವತ್ತು ತಂತ್ರಾಂಶ 2.0 ರಲ್ಲಿ ಸಲ್ಲಿಸುವ ಅರ್ಜಿಗಳನ್ನು ನಿಯಮಗಳ ಅನ್ವಯ ಪರಿಶೀಲಿಸಿ ನಮೂನೆಗಳನ್ನು ವಿತರಿಸಲು ಕ್ರಮವಹಿಸಲಾಗುತ್ತಿದ್ದು, ಇಲಾಖೆಯೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಈ ಮೂಲಕ ಕೋರುತ್ತೇನೆ.







