ಹೊಸ ವರ್ಷ, ಹೊಸ ಭರವಸೆ!  ಸಿಲಿಕಾನ್ ಸಿಟಿಯ ಬೀದಿಗಳಲ್ಲಿ ಸಂಭ್ರಮದ ಅಲೆ. 2026ಕ್ಕೆ ಅದ್ಧೂರಿ ಮುನ್ನುಡಿ ಬರೆದ ಬೆಂಗಳೂರಿಗರು.

ಬೆಂಗಳೂರು: ಜಗಮಗಿಸುವ ಬಣ್ಣದ ಬೆಳಕು… ರಂಗೇರಿದ ರಾತ್ರಿ… ಮತ್ತಿನ ಗಮ್ಮತ್ತಿನಲ್ಲಿ ನೆರೆದ ಸಹಸ್ರಾರು ಜನರು… ‘ಹ್ಯಾಪಿ ನ್ಯೂ ಇಯರ್‌’ ಎಂಬ ಮುಗಿಲೆತ್ತರದ ಘೋಷಣೆ… ಚುಂಬನ, ಆಲಿಂಗನ… ಜಾತಿ, ಧರ್ಮ, ಲಿಂಗ ಭೇದವಿಲ್ಲದ ಸಮ್ಮಿಲನ… ಶುಭಾಶಯಗಳ ವಿನಿಮಯ..

ಇದು ರಾಜಧಾನಿಯಲ್ಲಿ’ ಹೊಸ ವರ್ಷ 2026 ‘ ಅನ್ನು ಸ್ವಾಗತಿಸಿದ ಸುಂದರ ಕ್ಷಣಗಳ ಚಿತ್ರಣ!

ಹೌದು… ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ಸಿಲಿಕಾನ್‌ ಸಿಟಿಯ ವಿವಿಧ ರಸ್ತೆಗಳಲ್ಲಿ ಹೊಸ ವರ್ಷದ ಸಾಮೂಹಿಕ ಸಂಭ್ರಮಾಚರಣೆ ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು. ಎಂಜಿ ರಸ್ತೆ, ಚರ್ಚ್‌ ಸ್ಟ್ರೀಟ್‌ ಯುವ ಸಮೂಹದಿಂದ ತುಂಬಿ ತುಳುಕಿತ್ತು. ರಾತ್ರಿ 9.30 ಗಂಟೆ ಸುಮಾರಿಗೆ ಪ್ರಣಯ ಜೋಡಿಗಳು, ಯುವಕ- ಯುವತಿಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.


ಕಿಕ್ಕಿರಿದ ಜನಸಮೂಹದ ನಡುವೆ ಸರಿಯಾಗಿ 12 ಗಂಟೆ ಆಗುತ್ತಿದ್ದಂತೆ ಒಮ್ಮೆಲೆಗೆ ‘ಹ್ಯಾಪಿ ನ್ಯೂ ಇಯರ್‌’ ಎಂಬ ಹರ್ಷೋದ್ಘಾರದ ಘೋಷಣೆಗಳು ಮುಗಿಲೆತ್ತರ ಮೊಳಗಿದವು. ಹೀಗೆ 2025ಕ್ಕೆ ಬಾಯ್‌ ಹೇಳುವ ಮೂಲಕ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ 2026 ಅನ್ನು ವೆಲ್‌ಕಮ್‌ ಮಾಡಲಾಯಿತು. ಯಾವುದೇ ಭೇದವಿಲ್ಲದೆ ಪರಸ್ಪರರು ಸಿಹಿ ತಿನಿಸಿ, ಚುಂಬನ, ಆಲಿಂಗನದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಿದರು. ಮೈಮನಕ್ಕೆ ಉತ್ಸಾಹ ನೀಡುವ ಸಂಗೀತದ ಅಬ್ಬರಕ್ಕೆ ಕುಣಿದು ಕುಪ್ಪಳಿಸಿ ಉಲ್ಲಸಿತರಾಗುವ ಮೂಲಕ ತಮ್ಮ ತಮ್ಮ ಸ್ನೇಹಿತರು, ಕುಟುಂಬಸ್ಥರ ಜತೆಗೆ ಸೆಲ್ಫಿಗೆ ಪೋಸ್‌ ನೀಡಿದರು. ಸಂಭ್ರಮದ ಕ್ಷಣಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದುಕೊಂಡರು.

ಇನ್ನು ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ, ಕಾಡುಗೋಡಿ, ಕೋರಮಂಗಲ, ಇಂದಿರಾನಗರ, ಗಾಂಧಿನಗರ ಸೇರಿದಂತೆ ವಿವಿಧೆಡೆಯ ಪಬ್‌ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು, ಪಂಚತಾರಾ ಹೋಟೆಲ್‌ಗಳಲ್ಲಿ ಜನ ತುಂಬಿ ತುಳುಕುತ್ತಿದ್ದರು. ಮದಿರೆಯ ಅಮಲಿನಲ್ಲಿ ಮಂದ ಬೆಳಕಿನಲ್ಲಿ ಡಿ.ಜೆ. ಸಂಗೀತಕ್ಕೆ ಹುಚ್ಚೆದ್ದು ಉನ್ಮಾದದಲ್ಲಿ ಕುಣಿದು ಕುಪ್ಪಳಿಸಿದರು. ಕೆಲವೆಡೆ ಕಲಾವಿದರ ಆಕರ್ಷಕ ನೃತ್ಯ, ಗಾಯನ ಈ ಕ್ಷಣವನ್ನು ಮತ್ತಷ್ಟು ರಂಗೇರಿಸಿತ್ತು.

ಅಪಾರ್ಟ್‌ಮೆಂಟ್‌ಗಳು, ಸ್ಟಾರ್‌ ಹೋಟೆಲ್‌ಗಳಲ್ಲಿಯೂ ಹೊಸ ವರ್ಷದ ಪಾರ್ಟಿಗಳು ಆಯೋಜನೆಗೊಂಡಿದ್ದವು. ಕುಟುಂಬಸ್ಥರು ತಮ್ಮ ಮಕ್ಕಳ ಜತೆ ಭಾಗಿಯಾಗಿದ್ದರು. ಹಲವು ಕಡೆ ಸಂಗೀತ ರಸಸಂಜೆ, ಜನಪದ ಹಾಡುಗಳ ಗಾಯನ ಆಯೋಜಿಸುವ ಮೂಲಕ ವಿಭಿನ್ನವಾಗಿ ಆಚರಣೆ ಮಾಡಲಾಯಿತು. ಕೆಲವರು ತಮ್ಮ ಮನೆಗಳಲ್ಲಿಯೇ ಕುಟುಂಬಸ್ಥರ ಜತೆ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಬಹುತೇಕ ವೆಜ್‌/ನಾನ್‌ವೆಜ್‌ ಹೋಟೆಲ್‌ಗಳಲ್ಲಿ ಹೊಸವರ್ಷದ ಪ್ರಯುಕ್ತ ವೆರೈಟಿ ಆಹಾರ ತಯಾರಿಸಿದ್ದಲ್ಲದೆ ಊಟಕ್ಕೆ ಆಗಮಿಸುವ ಗ್ರಾಹಕರಿಗೆ ಆಫರ್‌ ಕೂಡ ನೀಡಲಾಗಿತ್ತು.

ನಶೆಯೇರಿಸಿಕೊಂಡವರಿಗೆ ವಿಶ್ರಾಂತಿ ಕೊಠಡಿಗಳು


ಅತಿಯಾದ ಮದ್ಯ ಸೇವನೆ ಹಾಗೂ ಪ್ರಜ್ಞೆ ಕಳೆದುಕೊಂಡವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ನಗರ ಪೊಲೀಸರು ಮಾಡಿದ್ದರು. ವಿಶೇಷ ಎಂದರೆ, ಎಂಜಿ ರಸ್ತೆ, ಬಿಗ್ರೇಡ್‌ ರಸ್ತೆ ಸೇರಿದಂತೆ ನಗರದ ವಿವಿಧ 15 ಕಡೆಗಳಲ್ಲಿ ಟೆಂಟ್‌ ಹಾಕಿ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಬೆಡ್‌ ಜತೆಗೆ ಅತಿಯಾಗಿ ಮದ್ಯ ಸೇವನೆ ಮಾಡಿ, ಪ್ರಜ್ಞೆ ತಪ್ಪಿದವರ ಆರೋಗ್ಯ ತಪಾಸಣೆ ಮಾಡಿ, ಬಳಿಕ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

  • Related Posts

    ಕರ್ನಾಟಕದಲ್ಲಿ ಸಮೃದ್ಧವಾದ ಅಂತರ್ಜಲ: 2025ರ ಮೌಲ್ಯಮಾಪನ ವರದಿ ಬಿಡುಗಡೆ ಮಾಡಿದ ಸಚಿವ ಬೋಸರಾಜು

    ಬೆಂಗಳೂರು: ರಾಜ್ಯ ಸರ್ಕಾರದ ಜಲಸಂರಕ್ಷಣಾ ಯೋಜನೆಗಳು ಮತ್ತು ವೈಜ್ಞಾನಿಕ ಜಲ ನಿರ್ವಹಣೆಯ ಫಲವಾಗಿ ಕರ್ನಾಟಕದಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ **’2025ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿ’**ಯನ್ನು ಬಿಡುಗಡೆ ಮಾಡಿದ ಸಣ್ಣ ನೀರಾವರಿ ಹಾಗೂ ಅಂತರ್ಜಲ…

    Continue reading
    ತುಮಕೂರು: ಅಭಿವೃದ್ಧಿ ಕಾಮಗಾರಿಗಳ ವಿಳಂಬಕ್ಕೆ ಸಚಿವ ಡಾ. ಜಿ. ಪರಮೇಶ್ವರ ಗರಂ; ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲು ಸೂಚನೆ

    ತುಮಕೂರು: ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಮಂಜೂರಾದ ಕಾಮಗಾರಿಗಳನ್ನು ಆರಂಭಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.Contentsಕಾಮಗಾರಿಗಳ…

    Continue reading

    Leave a Reply

    Your email address will not be published. Required fields are marked *