ಹೊಸ ವರ್ಷಕ್ಕೆ ನಮ್ಮ ಮೆಟ್ರೋ ವಿಶೇಷ ಉಡುಗೊರೆ: ತಡರಾತ್ರಿ 2:45ರವರೆಗೆ ರೈಲು ಸಂಚಾರ ವಿಸ್ತರಣೆ!

ಬೆಂಗಳೂರು: 2025 ಕಳೆದು 2026ನ್ನು ಸ್ವಾಗತಿಸುವ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ರಾಜಧಾನಿ ಬೆಂಗಳೂರು ಸಿದ್ಧವಾಗಿದೆ. ಡಿಸೆಂಬರ್ 31ರ ಮಧ್ಯರಾತ್ರಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮನೆಗೆ ತೆರಳುವವರಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೋ (Namma Metro) ತನ್ನ ಸೇವಾ ಸಮಯವನ್ನು ವಿಸ್ತರಣೆ ಮಾಡಿದೆ. ರೈಲು ಹೊರಡುವ ಹಾಗೂ ನಿಲ್ದಾಣದಲ್ಲಿ ಕಾಯುವ ಸಮಯದಲ್ಲಿ ಬದಲಾವಣೆ ಮಾಡಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL)ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮವು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ ನೇರಳೆ ಮಾರ್ಗ, ಹಸಿರು ಮಾರ್ಗ ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಿದೆ. ಕೊನೆಯ ಮೆಟ್ರೋ ರೈಲುಗಳು ಹೊರಡುವ ಸಮಯವನ್ನು 2025ರ ಡಿಸೆಂಬರ್ 31ರ ಮಧ್ಯರಾತ್ರಿಯ ನಂತರ, ಅಂದರೆ 1ನೇ ಜನವರಿ 2026ರಂದು ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ಮೆಟ್ರೋ ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅದರ ವಿವರ ಮುಂದಿದೆ.

ತಡರಾತ್ರಿ 2ಗಂಟೆವರೆಗೂ ಮೆಟ್ರೋ ಸೇವೆ

* ನೇರಳೆ ಮಾರ್ಗ: ವೈಟ್‌ಫೀಲ್ಡ್-ಚಲ್ಲಘಟ್ಟದ ವರೆಗೆ ಬೆಳಗಿನ ಜಾವ 1:45 ಗಂಟೆಗೆ ಕೊನೆ ರೈಲು ಚಲಿಸುತ್ತದೆ. ಚಲ್ಲಘಟ್ಟ ವೈಟ್‌ ಫೀಲ್ಡ್ ವರೆಗೆ ಕೊನೆ ರೈಲು ಬೆಳಗಿನ ಜಾವ 2 ಗಂಟೆಗೆ ಹೊರಡುತ್ತದೆ.

* ಹಸಿರು ಮಾರ್ಗ: ಮಾದಾವರ ದಿಂದ ರೇಷ್ಮೆ ಸಂಸ್ಥೆಯ ವರೆಗೆ ಬೆಳಗಿನ ಜಾವ 2 ಗಂಟೆಗೆ ಕೊನೆ ರೈಲು ಹಾಗೂ ರೇಷ್ಮೆ ಸಂಸ್ಥೆ ಯಿಂದ ಮಾದಾವರದ ವರೆಗೆ ಬೆಳಗಿನ ಜಾವ 2 ಗಂಟೆಗೆ ರೈಲು ಸಂಚಾರ ಮಾಡಲಿದೆ.

* ಹಳದಿ ಮಾರ್ಗ: ಆ.ರ್‌ವಿ ರಸ್ತೆ ಯಿಂದ ಬೊಮ್ಮಸಂದ್ರದ ವರೆಗೆ ಬೆಳಗಿನ ಜಾವ 3:10 ಕೊನೆ ರೈಲು ಹಾಗೂ ಬೊಮ್ಮಸಂದ್ರ ದಿಂದ ಆರ್‌ವಿ ರಸ್ತೆಯವರೆಗೆ ಬೆಳಗಿನ ಜಾವ 1:30ಗಂಟೆಗೆ ಕೊನೆ ರೈಲು ಸಂಚಾರ ಮಾಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ತಡರಾತ್ರಿ 2:45ಕ್ಕೆ ಮೆಜೆಸ್ಟಿಕ್‌ನಿಂದ ಕೊನೆ ರೈಲು ಸಂಚಾರ

ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣದಿಂದ ಬೆಳಗಿನ ಜಾವ 2:45 ಗಂಟೆಗೆ ಕೊನೆಯ ರೈಲು ಹೊರಡಲಿದೆ. ವೈಟ್‌ ಫೀಲ್ಡ್ ಮತ್ತು ಚಲ್ಲಘಟ್ಟ ಕಡೆಗೆ (ನೇರಳೆ ಮಾರ್ಗ) ಹಾಗೂ ಮಾದಾವರ ಮತ್ತು ರೇಷ್ಮೆ ಸಂಸ್ಥೆ ಕಡೆಗೆ (ಹಸಿರು ಮಾರ್ಗ) ಹೊರಡುವ ಪ್ರಯಾಣೀಕರು ಈ ಸಮಯ ನೋಡಿಕೊಂಡು ನಿಲ್ದಾಣ ಪ್ರವೇಶಿಸಬೇಕಿದೆ.

8 ಮತ್ತು 15 ನಿಮಿಷಗಳ ಅಂತರದಲ್ಲಿ ರೈಲು ಸಂಚಾರ

ಸಂಭ್ರಮಾಚರಣೆ ಬಳಿಕ ಪ್ರಯಾಣಿಕರಿಗೆ ಮೆಟ್ರೋ ಸೇವೆ ಲಭ್ಯವಾಗುವಂತೆ ಡಿಸೆಂಬರ್ 31ರ ರಾತ್ರಿ 11:30 ರಿಂದ ವಿಸ್ತರಿತ ಸೇವೆ ಮುಗಿಯುವವರೆಗೂ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ ಹಾಗೂ ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ.

ಡಿ.31ರಂದು ಎಂ.ಜಿ ರಸ್ತೆ ನಿಲ್ದಾಣ ಬಂದ್

ಹೊಸ ವರ್ಷದ ಸಂಭ್ರಮಾಚರಣೆ ನಗರದ ಎಂಜಿ ರಸ್ತೆಯಲ್ಲಿ ಮುಗಿಲು ಮುಟ್ಟಿರುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ಇಲ್ಲಿನ ಅತ್ಯಧಿಕ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ 31ನೇ ಡಿಸೆಂಬರ್ ರಾತ್ರಿ 10 ಗಂಟೆಯಿಂದ ರಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಆದರೆ, ರೈಲುಗಳು ಪಕ್ಕದ ನಿಲ್ದಾಣಗಳಾದ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿವೆ. ಪ್ರಯಾಣಿಕರು ಅಲ್ಲಿಂದ ರೈಲು ಹತ್ತಬಹುದು ಮತ್ತು ಇಳಿಯಬಹುದು.

ಟೋಕನ್ ಟಿಕೆಟ್ ಮಾರಾಟ ಇಲ್ಲ

ಮೆಟ್ರೋ ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 11 ಗಂಟೆ ನಂತರ ಟೋಕನ್ ಮಾರಾಟ ಇರುವುದಿಲ್ಲ. ಈ ನಿಲ್ದಾಣಗಳಿಂದ ರಾತ್ರಿ 11 ಗಂಟೆ ಗಂಟೆಯ ಬಳಿಕ ಓಡಾಡುವ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ಗಳ ಮೂಲಕ, ಮುಂಗಡವಾಗಿ ರಿಟರ್ನ್ ಟಿಕೆಟ್ ಖರೀದಿಸುವಂತೆ ಅಥವಾ ಸಾಕಷ್ಟು ನಗದುವಿರುವ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುವಂತೆ ಮೆಟ್ರೋ ಅಧಿಕಾರಿಗಳು ವಿನಂಸಿಕೊಂಡಿದ್ದಾರೆ. ಸಾರ್ವಜನಿಕರು ತಡರಾತ್ರಿವರೆಗೆ ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರೆ, ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣ ಯೋಜಿಸಬೇಕು. ಸುರಕ್ಷಿತ ಮತ್ತು ಸುಗಮ ಸಂಚಾರಕ್ಕೆ ಮೆಟ್ರೋ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದೆ.


  • Related Posts

    ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರವಹಿಸಿ: ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಸೂಚನೆ

    ಕಲಬುರಗಿ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮುಂಬರುವ ಎರಡು ತಿಂಗಳುಗಳಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.Contentsನೀರಿನ ಸರಬರಾಜಿಗೆ ಆದ್ಯತೆಜೆಜೆಎಂ…

    Continue reading
    ಕುಟುಂಬ ಸಮೇತ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

    ಮೈಸೂರು: ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.Contentsನೀರಿನ ಸರಬರಾಜಿಗೆ ಆದ್ಯತೆಜೆಜೆಎಂ ಕಾಮಗಾರಿ ಹಾಗೂ ವಿದ್ಯುತ್ ಸಂಪರ್ಕಸ್ವಚ್ಛತೆ…

    Continue reading

    Leave a Reply

    Your email address will not be published. Required fields are marked *