ʻಬಿಗ್ ಬಾಸ್ ಕನ್ನಡ 12’ರಲ್ಲಿ ಭಾನುವಾರದ (ಡಿ.28) ವೀಕೆಂಡ್ ಎಪಿಸೋಡ್‌ನಲ್ಲಿ ದೊಡ್ಡ ಟ್ವಿಸ್ಟ್ ಎದುರಾಗಿದೆ. ಇಂದಿನ ಎಲಿಮಿನೇಷನ್‌ನಲ್ಲಿ ಮಾಳು ನಿಪನಾಳ ಅವರು ʻಬಿಗ್ ಬಾಸ್ʼ ಮನೆಯಿಂದ ಹೊರಹೋಗುವಂತಾಗಿದೆ. ಆದರೆ, ಸ್ಪಂದನಾ ಸೋಮಣ್ಣ ಅವರು ಸೇಫ್ ಆಗಿ ಮನೆಯಲ್ಲಿ ಮುಂದುವರೆಯಲಿದ್ದಾರೆ.
ಇನ್ನೇನು ʻಬಿಗ್ ಬಾಸ್ ಕನ್ನಡ 12’ರ ಫಿನಾಲೆ ಸಮೀಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಟ್ವಿಸ್ಟ್ ಇತ್ತು. ಈ ವಾರ ಮನೆಯಿಂದ ಹೊರಹೋಗಲು ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ರಘು, ಗಿಲ್ಲಿ, ಧ್ರುವಂತ್, ಸ್ಪಂದನಾ, ಮಾಳು ನಿಪನಾಳ, ಧನುಷ್, ಸೂರಜ್, ರಾಶಿಕಾ ನಾಮಿನೇಟ್ ಆಗಿದ್ದರು. ಈಗಾಗಲೇ ಶನಿವಾರದ ಎಪಿಡೋಸ್‌ನಲ್ಲಿ ಸೂರಜ್ ಸಿಂಗ್ ಔಟ್ ಆಗಿದ್ದರು. ಇದೀಗ, ಮಾಳು ನಿಪನಾಳ ದೊಡ್ಮನೆ ಜರ್ನಿಗೆ ಗುಡ್‌ಬೈ ಹೇಳಿದ್ದಾರೆ.
ಈ ವಾರ ಕಿಚ್ಚನ ಅನುಪಸ್ಥಿತಿಯಲ್ಲೇ ಎಲಿಮಿನೇಷನ್ ಪ್ರಕ್ರಿಯೆಗಳು ನಡೆದಿವೆ. ʻಬಿಗ್ ಬಾಸ್ʼ ಮನೆಗೆ ನಿನ್ನೆಯೇ ಒಂದಷ್ಟು ಅತಿಥಿಗಳು ಎಂಟ್ರಿ ಕೊಟ್ಟು ಹಲವರನ್ನ ಸೇಫ್ ಮಾಡಿ ಹೊರಬಂದಿದ್ದರು. ಅಂತೆಯೇ ಇಂದು ಕೂಡ ನಿರೂಪಕಿ ಅನುಪಮಾ ಗೌಡ ಅವರು ʻಬಿಗ್ ಬಾಸ್ʼಗೆ ಎಂಟ್ರಿ ಕೊಟ್ಟು, ಸ್ಪರ್ಧಿಗಳ ಜೊತೆಗೆ ಕೆಲ ಕಾಲ ಸಮಯ ಕಳೆದರು. ಆಕ್ಟಿವಿಟಿಗಳ ಮೂಲಕ ಒಬ್ಬರಾದ ನಂತರ ಒಬ್ಬರನ್ನ ಅನುಪಮಾ ಗೌಡ ಸೇಫ್ ಮಾಡುತ್ತಾ ಬಂದರು. ಎಲ್ಲರನ್ನೂ ಸೇಫ್ ಮಾಡುತ್ತಾ, ಕೊನೆಗೆ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಸೇಫ್ ಆಗಿದ್ದೀರಿ ಎಂದು ಘೋಷಿಸಿದರು. ಬಳಿಕ ಸ್ಪಂದನಾ ಸೋಮಣ್ಣ ಮತ್ತು ಮಾಳು ನಿಪನಾಳ ಇಬ್ಬರ ನಡುವೆ ನೇರ ಸ್ಪರ್ಧೆ ಇತ್ತು. ಸ್ಪರ್ಧಿಗಳಲ್ಲಿ ಕೆಲವರು, ಮಾಳು ಎಲಿಮಿನೇಟ್ ಆಗಬೇಕು ಅಂದಿದ್ರೆ, ಇನ್ನೂ ಹಲವರು ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಬೇಕು ಅಂದಿದ್ದರು.
ಮಾಳು ಹಾಗೂ ಸ್ಪಂದನಾ ಅವರನ್ನ ಎರಡು ಬೇರೆ ಬೇರೆ ಕಾರಿನಲ್ಲಿ ಕೂರಿಸಿ, ಯಾವ ಕಾರು ವಾಪಾಸ್ ಆದಾಗ ಅದರಲ್ಲಿ ಯಾವ ಸ್ಪರ್ಧಿ ಇರ್ತಾರೋ ಅವರು ಸೇಫ್. ಮತ್ತು ಯಾರು ಇರೋದಿಲ್ಲವೋ ಅವರು ಔಟ್ ಎಂದಿದ್ದರು ಬಿಗ್ ಬಾಸ್ʼ. ಕೊನೆಯವರೆಗೂ ಮಾಳು ಎಲಿಮಿನೇಟ್ ಆಗಲ್ಲ, ವಾಪಾಸ್ ಬರ್ತಾರೆ ಅಂದುಕೊಂಡಿದ್ದರು ಬಿಗ್ ಬಾಸ್ ಸ್ಪರ್ಧಿಗಳು. ಆದರೆ, ಸ್ಪಂದನಾ ಸೋಮಣ್ಣ ಸೇಫ್ ಆಗಿ ಮಾಳು ಎಲಿಮಿನೇಟ್ ಆಗಿದ್ದು ಕೆಲವರಿಗೆ ಶಾಕಿಂಗ್ ಕೂಡ ಆಗಿದೆ.
ಮಾಳು ನಿಪನಾಳ ಅವರ ಜರ್ನಿ ʻಬಿಗ್ ಬಾಸ್ʼ ಶೋನಲ್ಲಿ ಆರಂಭದಿಂದಲೂ ಗಮನ ಸೆಳೆದಿತ್ತು. ಉತ್ತರ ಕರ್ನಾಟಕದ ಪ್ರತಿಭೆಯಾಗಿರುವ ಮಾಳು ʻಬಿಗ್ ಬಾಸ್ʼನಲ್ಲಿ ಯಾವ ರೀತಿ ಆಟ ಆಡ್ತಾರೆ ಅಂತ ಹಲವರಲ್ಲಿ ಕುತೂಹಲವಿತ್ತು. ಆದರೆ, ವೀಕ್ಷಕರ ನಿರೀಕ್ಷೆಯನ್ನ ಮಾಳು ತಲುಪಿಲ್ಲವಾದರೂ, ʻಬಿಗ್ ಬಾಸ್ʼ ಮಿನಿ ಫಿನಾಲೆಯಲ್ಲಿ ಫೈನಲಿಸ್ಟ್ ಆಗಿದ್ದರು. ಅಲ್ಲದೇ ವೀಕ್ಷಕರ ಮನಗೆದ್ದು ಕ್ಯಾಪ್ಟನ್ ಕೂಡ ಆಗಿದ್ದರು. ಆದರೆ, ಈಗ ಫಿನಾಲೆಗೆ ಮುನ್ನವೇ ಅವರ ಪಯಣ ʻಬಿಗ್ ಬಾಸ್ʼ ಮನೆಯಲ್ಲಿ ಅಂತ್ಯಗೊಂಡಿದೆ.









